ಜ್ಞಾನ ಕೌಶಲ್ಯಗಳು ಉದ್ಯೋಗಕ್ಕೆ ಸಹಕಾರಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ.ಮೇ 27: ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಗಣಕೀಕರಣದ ಜ್ಞಾನ ಮತ್ತು ತಂತ್ರಾಂಶ ಕೌಶಲ್ಯವನ್ನು ಪಡೆದುಕೊಂಡರೆ ಭವಿಷ್ಯದಲ್ಲಿ ಉತ್ತಮ  ಉದ್ಯೋಗಾವಕಾಶಗಳ ಬಾಗಿಲು ತೆರೆಯುವುದರಲ್ಲಿ ಸಂಶಯವಿಲ್ಲ  ಎಂದು ತರಬೇತಿದಾರರಾದ ಅನಿತಾ ರಾಜ್ ನುಡಿದರು.
ನಗರದ  ಸರಳಾದೇವಿ  ಕಾಲೇಜಿನಲ್ಲಿ ನಾಂದಿ ಫೌಂಡೇಶನ್ ಹಾಗೂ ಮಹೇಂದ್ರ ಪ್ರೈಡ್ ಕ್ಲಾಸ್ ರೂಂ ಇವುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ವಿದ್ಯಾರ್ಥಿನಿಯರಿಗಾಗಿ ಏರ್ಪಡಿಸಿದ್ದ ಒಂದು ವಾರದ ‘ಸಾಕ್ಷರತಾ ತಂತ್ರಜ್ಞಾನ ಮತ್ತು ಕೌಶಲ್ಯ ತರಬೇತಿ ‘ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ. ಈ ತರಬೇತಿಯ ಮೂಲಕ ಸಂದರ್ಶನಗಳನ್ನು ಸುಲಭವಾಗಿ ಎದುರಿಸಲು ಬೇಕಾದ ಕೌಶಲ್ಯಗಳನ್ನು ಕಲಿಸಿಕೊಡುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.
ಮತ್ತೋರ್ವ  ತರಬೇತಿದಾರ ಸಾಮುವೆಲ್ ಜಾನ್ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ವೃತ್ತಿ ಬದುಕನ್ನು ರೂಪಿಸಿಕೊಳ್ಳಲು ಮತ್ತು ಕಂಡ ಕನಸುಗಳನ್ನು ನನಸಾಗಿಸಿಕೊಳ್ಳಲು ಇಂತಹ ತರಬೇತಿಯು ಸಹಕಾರಿಯಾಗುತ್ತದೆಂದರು
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್ .ಕೆ. ಮಂಜುನಾಥ್ ರೆಡ್ಡಿ  ವಿದ್ಯಾರ್ಥಿಗಳು ಶಿಸ್ತು ,ಶ್ರದ್ಧೆಯೊಂದಿಗೆ ಇಂತಹ ತರಬೇತಿಗಳಿಂದ ಉನ್ನತ ಮಟ್ಟವನ್ನು ತಲುಪಲು, ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಖಂಡಿತಾ ಸಾಧ್ಯ ಎಂದರು.ಪ್ರಾಧ್ಯಾಪಕರಾದ ಡಾ.ಮೋನಿಕಾ ರಂಜನ್. ಡಾ.ಮಂಜುನಾಥ, ದೊಡ್ಡ ಬಸವರಾಜ ಇದ್ದರು.