ಆದಿಲ್ ಸಾವಿನ‌ ಪ್ರಕರಣ; ಪೋಲೀಸ್ ಅಧಿಕಾರಿಗಳ ಅಮಾನತು ಹಿಂಪಡೆಯಲು‌ ಒತ್ತಾಯ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೮: ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ನಡೆದ ಆದಿಲ್ ಎಂಬುವವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಡಿ.ವೈ.ಎಸ್.ಪಿ., ಸಿಪಿಐ, ಪಿ.ಎಸ್.ಐ.ರವರುಗಳನ್ನು ಅಮಾನತು ಮಾಡಿರುವ ಆದೇಶವನ್ನು ಕೂಡಲೇ ವಾಪಾಸ್ಸು ಪಡೆಯಬೇಕೆಂದು ಪೊಲೀಸ್ ಕುಟುಂಬಗಳ ಕಲ್ಯಾಣ ಸಂಘ- ಕರ್ನಾಟಕದ ಅಧ್ಯಕ್ಷ ಹೊನ್ನಾಳಿಯ ಗುರುಪಾದಯ್ಯ ಮಠದ್ ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಟ್ಕಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿ ಮತ್ತು ಪೊಲೀಸ್ ವಾಹನಗಳನ್ನು ಜಖಂಗೊಳಿಸಿದವರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಬೆಳ್ತಂಗಡಿ ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ಮಾಡಿ, ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಅಲ್ಲಿನ ಶಾಸಕ ಹರೀಶ್ ಪೂಂಜಾ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಕಾನೂನನ್ನು ಕೈಗೆತ್ತಿಕೊಳ್ಳುವ ಕಿಡಿಗೇಡಿಗಳಿಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಬೇಸತ್ತು ಹೋಗಿದ್ದಾರೆ. ಕಾನೂನು ಪರಿಪಾಲನೆ ಮಾಡುತ್ತಿರುವ ಪೊಲೀಸರಿಗೆ ಆತ್ಮಸ್ಥೆರ್ಯ ತುಂಬುವುದು, ಅವರಿಗೆ ಸೂಕ್ತ ಭದ್ರತೆ ನೀಡುವುದು ಸರ್ಕಾರದ, ಆ ಭಾಗದ ಜನಪ್ರತಿನಿಧಿಗಳ ಮತ್ತು ಪ್ರಜ್ಞಾವಂತ ನಾಗರಿಕರ ಆದ್ಯ ಕರ್ತವ್ಯವಾಗಿದೆ ಎಂದರು.ಇಂಥ ಘಟನೆಗಳು ನಡೆದಾಗ ಸರ್ಕಾರ ಸಂಬಂಧಪಟ್ಟ ಪೊಲೀಸ್ ಠಾಣೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದು, ಅಮಾನುತು ಮಾಡುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಈ ರೀತಿಯ ಕ್ರಮಗಳು ಪೊಲೀಸರ ಕರ್ತವ್ಯನಿರ್ವಹಣೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಅವರ ಆತ್ಮಸ್ಥೆರ್ಯ ಕುಗ್ಗಿದಂತಾಗಿ ಸಾಮಾಜಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಲ್ಲದೇ ಸಮಾಜಘಾತುಕ ಶಕ್ತಿಗಳಿಗೆ, ಪುಂಡ-ಪೋಕರಿಗಳಿಗೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.