ಪಾರಂಪರಿಕ ಔಷಧ ಪದ್ಧತಿ ಉಳಿಸಿ ಬೆಳೆಸಲು ಕರೆ
ಬೆಳಗಾವಿ, ಮೇ. 28: ಪಾರಂಪರಿಕ ಔಷಧೀಯ ಸಂಶೋಧನಾ ಕ್ಷೇತ್ರದಲ್ಲಿ ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ದೇಶವನ್ನು ಮುಂಚೂಣಿಗೆ ಕರೆದೊಯ್ಯುವ ಹೊಣೆಗಾರಿಕೆ ವಿಜ್ಞಾನಿಗಳು/ಸಂಶೋಧಕರ ಮೇಲಿದೆ. ಜೀವವೈವಿಧ್ಯವನ್ನು ಕಾಪಾಡುವ ಮೂಲಕ ಪಾರಂಪರಿಕ ಔಷಧೀಯ ಪದ್ಧತಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕು ಎಂದು ಉಪ ರಾಷ್ಟ್ರಪತಿಯವರಾದ ಜಗದೀಪ್ ಧನಕರ ಅವರು ಕರೆ ನೀಡಿದರು.
ನಗರದಲ್ಲಿ ನಡೆದ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಧಾನ ಸಂಸ್ಥೆಯ 18 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಪ್ರತಿಯೊಬ್ಬರು ಪರಸ್ಪರ ಸಹಕರಿಸುವ ಮೂಲಕ ಸಂದಿಗ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದು ಭಾರತೀಯ ಸಂಸ್ಕೃತಿಯಾಗಿದೆ ಎಂದರು.
ಪಾರಂಪರಿಕ ಔಷಧ-ಸಂಶೋಧನೆ ಸವಾಲು:
ಡಯಾಬಿಟಿಸ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪಾರಂಪರಿಕ ಔಷಧ ಕಂಡುಹಿಡಿಯುವುದು ಸವಾಲಾಗಿದೆ. ವಿಜ್ಞಾನಿಗಳು ಸಂಶೋಧನಾ ಕ್ಷೇತ್ರವನ್ನು ವಿಸ್ತರಿಸುವ ಮೂಲಕ ಮಾನವ ಸಂಕುಲದ ಹಿತರಕ್ಷಿಸಬೇಕು ಎಂದು ಕರೆ ನೀಡಿದರು.
ದೇಶದ ಆಯುಷ್ ಇಲಾಖೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಔಷಧೀಯ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿದೆ.
ಸಂಶೋಧನೆ ಹಾಗೂ ಅಭಿವೃದ್ಧಿ ಕೆಲಸಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು. ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಯು ದೇಶದ ಆರ್ಥಿಕ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದರು.
ಕೋವಿಡ್ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಐಸಿಎಂ ಆರ್ ಪಾತ್ರ ಪ್ರಮುಖವಾಗಿದೆ. ಪಾರಂಪರಿಕ ಔಷಧ ವಿಜ್ಞಾನ ಸಂಸ್ಥೆಯು ಆಧುನಿಕ ತಂತ್ರಜ್ಞಾನಗಳ ಮೂಲಕ ಪಾರಂಪರಿಕ ಔಷಧೀಯ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳುತ್ತಿದೆ.
ಪಶ್ಚಿಮ ಘಟ್ಟದಲ್ಲಿರುವ ಔಷಧೀಯ ಸಸ್ಯಸಂಕುಲಗಳ ಅಧ್ಯಯನ ನಡೆಸುವ ಮೂಲಕ ಗಿಡಮೂಲಿಕೆ ಔಷಧಿ ತಯಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್, ಶ್ರೀಮತಿ ಡಾ.ಸುದೇಶ ಧನಕರ, ಬೆಳಗಾವಿಯ ಐಸಿಎಂಆರ್-ಎನ್.ಐ.ಟಿ.ಎಂ. ನಿರ್ದೇಶಕರಾದ ಡಾ.ಸುಬರ್ಣ ರಾಯ್ ಉಪಸ್ಥಿತರಿದ್ದರು.
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಶ್ರೀಮತಿ ಅನು ನಾಗರ ಅವರು ಸ್ವಾಗತಿಸಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೆÇಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಐಸಿಎಂಆರ್-ಎನ್‍ಐಟಿಎಂ ವಿಜ್ಞಾನಿಗಳು, ಸಂಶೋಧಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.