ಶಾಲಾ ಕೋಣೆಗಳು ಸೋರದಂತೆ ತುರ್ತು ಕ್ರಮಕ್ಕೆ ಸೂಚನೆ
ಧಾರವಾಡ, ಮೇ.28: ಜಿಲ್ಲೆಯಲ್ಲಿ ಮಳೆ ಆರಂಭವಾಗಿರುವ ಹಿನ್ನಲೆಯಲ್ಲಿ ಅಂಗನವಾಡಿ, ಶಾಲೆ, ಕಾಲೇಜುಗಳ ಕೋಣೆಗಳು ಸೋರುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತುರ್ತು ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬರ ಮುಂಗಾರು ಪೂರ್ವ ಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಶಿಥಿಲಾವಸ್ಥೆಯಲ್ಲಿರುವ ಹಾಗೂ ಸೋರುತ್ತಿರುವ ಅಂಗನವಾಡಿ, ಶಾಲೆ, ಕಾಲೇಜುಗಳ ಕಟ್ಟಡಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ತಕ್ಷಣವೇ ಜೂನ್ 30 ರೊಳಗೆ ತಮಗೆ ವರದಿ ಒಪ್ಪಿಸುವಂತೆ ತಿಳಿಸಿದರಲ್ಲದೆ ಎಲ್ಲಿಯಾದರೂ ತುರ್ತು ರಿಪೇರಿ ಕಾರ್ಯ ಅಗತ್ಯವಿದ್ದಲ್ಲಿ ಪ್ರಸ್ತಾವನೆ ಸಿದ್ಧಪಡಿಸಿ ಕಾರ್ಯಪ್ರವರ್ತರಾಗುವಂತೆ ಸೂಚಿಸಿದರು.
ಶಿಥಿಲಾವಸ್ಥೆಯಲ್ಲಿರುವ ಅಥವಾ ಸೋರುತ್ತಿರುವ ಕಟ್ಟಡಗಳಲ್ಲಿ ವಿದ್ಯಾರ್ಥಿಗಳು ಕೂರುವುದು ಎಲ್ಲಿಯಾದರೂ ಗಮನಕ್ಕೆ ಬಂದಲ್ಲಿ ಅಂಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರದಡಿ ಸಣ್ಣ ಪುಟ್ಟ ತುರ್ತು ರಿಪೇರಿಗಳಿಗೆ ಅನುದಾನ ಲಭ್ಯವಿದ್ದು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪಂಚಾಯತ ರಾಜ್ ಇಂಜಿನೀಯರಿಂಗ್ ಅಧಿಕಾರಿಗಳು ಜಂಟಿಯಾಗಿ ಪ್ರಸ್ತಾವನೆಯನ್ನು ಜೂನ್ 30 ರೊಳಗಾಗಿ ನೀಡುವಂತೆ ತಿಳಿಸಿದರು.
ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ದುರ್ಬಲ ಸೇತುವೆಗಳು, ದುರ್ಬಲ ಕೆರೆ ಬಂಡ್‍ಗಳನ್ನು ಗುರುತಿಸಿ ಅಪಾಯವಿದ್ದಲ್ಲಿ ತಕ್ಷಣವೇ ವರದಿ ನೀಡುವಂತೆ ಲೋಕೋಪಯೋಗಿ, ಸಣ್ಣ ನೀರವಾರಿ, ಪಂಚಾಯತ್ ರಾಜ್ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು. ಮಳೆಗಾಲದಲ್ಲಿ ಪ್ರವಾಹದಿಂದ ಜನರಿಗೆ ಸಂಪರ್ಕದ ತೊಂದರೆಯಾಗದಂತೆ ಕ್ರಮ ವಹಿಸಬೇಕೆಂದರು. ಅಳ್ನಾವರದ ಹುಲಿಕೆರೆ ಈಗಾಗಲೇ ದುರಸ್ತಿಯಾಗಿದ್ದು, ನಿಗದಿ ಕೆರೆ ದುರಸ್ತಿಗೆ ಟೆಂಡರ್ ಕರೆಯಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ತಹಶೀಲ್ದಾರರು ಹಾಗೂ ತಾಲೂಕು ಪಂಚಾಯತ ಇಓ.ಗಳು ತಮ್ಮ ವ್ಯಾಪ್ತಿಯಲ್ಲಿಯ ಅಪಾಯಕಾರಿ ಹಳ್ಳ, ಕೊಳ್ಳ, ಕೆರೆಗಳ ಬಗ್ಗೆ ಗಮನಹರಿಸತಕ್ಕದ್ದು. ಮಕ್ಕಳು ಕೆರೆಯಲ್ಲಿ ಈಜಲು ಹೋಗದಂತೆ ಆಯಾ ಸ್ಥಳಗಳಲ್ಲಿ ಮುಂಜಾಗೃತಾ ಅಪಾಯದ ಸ್ಥಳವೆಂದು ಬೋರ್ಡಗಳನ್ನು ಹಾಕಿಸಿ ಡಂಗೂರ ಹೊಡಿಸಬೇಕೆಂದು ತಿಳಿಸಿದರು. ಮಳೆಗಾಲದಲ್ಲಿ ಯಾವುದೇ ಜೀವಹಾನಿ ಆಗದಂತೆ ಅಧಿಕಾರಿಗಳು ಮುನ್ನಚ್ಚರಿಕಾ ಕ್ರಮ ಅನುಸರಿಸಲು ತಿಳಿಸಿದರು.
ಹೆಸ್ಕಾಂ ಅಧಿಕಾರಿಗಳು ಅಪಾಯಕಾರಿ ವಿದ್ಯುತ್ ಕಂಬ ಹಾಗೂ ತಂತಿಗಳ ಬಗ್ಗೆ ತಕ್ಷಣ ಗಮನಹರಿಸಿ ಮುಂಜಾಗೃತಾ ಕ್ರಮವಾಗಿ ದುರಸ್ತಿ ಮಾಡತಕ್ಕದು. ವಿದ್ಯುತ್ ತಂತಿಗಳ ಮೇಲಿರುವ ಗಿಡ, ಮರಗಳ ಟೊಂಗೆಗಳನ್ನು ಕಟಾವು ಮಾಡುವಂತೆ ಸೂಚಿಸಿದರು. ನವಲಗುಂದ ತಾಲೂಕಿನ ಬೆಣ್ಣಿಹಳ್ಳ ಹಾಗೂ ತುಪ್ಪರಿಹಳ್ಳದಲ್ಲಿ ಪ್ರವಾಹದ ಬಗ್ಗೆ ಸ್ಥಳದ ತಹಶೀಲ್ದಾರ ಈಗಾಗಲೇ ಎಚ್ಚರಿಕೆ ವಹಿಸಿತಕ್ಕದ್ದು. 26 ಗ್ರಾಮಗಳ ವರದಿ ಸಿದ್ಧಪಡಿಸಿ ಕಾರ್ಯಪ್ರವರ್ತರಾಗುವಂತೆ ತಿಳಿಸಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಕಲುಷಿತ ನೀರು ಕುಡಿಯುವ ನೀರಿಗೆ ಸೇರಿ ಸಾಂಕ್ರಾಮಿಕ ರೋಗ ಹರಡದಂತೆ ಸಂಬಂಧಿಸಿದ ಅಧಿಕಾರಿಗಳು ಪ್ರತಿದಿನ ಜಲಮೂಲಗಳ ಗುಣಮಟ್ಟ ಪರೀಕ್ಷಿಸತಕ್ಕದ್ದು. ನೀರಿನ ಟ್ಯಾಂಕ್‍ಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸತಕ್ಕದ್ದು. ನೀರಿನ ಕೆಮಿಕಲ್ ಹಾಗೂ ಜೈವಿಕ ಪರೀಕ್ಷೆ ನಡೆಸಬೇಕು. ಆರೋಗ್ಯ ಇನ್ಸಪೆಕ್ಟರ್‍ಗಳು, ವಾಟರ್‍ಮ್ಯಾನ್‍ಗಳು ಕಡ್ಡಾಯವಾಗಿ ಈ ಬಗ್ಗೆ ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಹಶೀಲ್ದಾರರು ಉಪಸ್ಥಿತರಿದ್ದರು.