ಮೇಲ್ಮನೆ ಚುನಾವಣೆಗೆ ಬಿಜೆಪಿಯಿಂದ ಕೂಚಬಾಳರನ್ನು ಆಯ್ಕೆ ಮಾಡಿ
ತಾಳಿಕೋಟೆ:ಮೇ.28: ಭಾರತೀಯ ಜನತಾ ಪಕ್ಷದ ಸಕ್ರೀಯ ಕಾರ್ಯಕರ್ತರಾಗಿ ಕಳೆದ 30 ವರ್ಷಗಳಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವದರೊಂದಿಗೆ ಜಿಲ್ಲೆಯಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬುವಂತಹ ಕಾರ್ಯ ಪಕ್ಷದ ಹೈಕಮಾಂಡ ಮಾಡಬೇಕೆಂದು ಬಿಜೆಪಿ ಹಿರಿಯ ಮುಖಂಡ ಸುರೇಶ ಹಜೇರಿ ಅವರು ಒತ್ತಾಯಿಸಿದರು.
ಸೋಮವಾರರಂದು ಪಟ್ಟಣದ ಶ್ರೀ ವಿಠ್ಠಲ ಮಂದಿರ ಸಭಾ ಭವನದಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಮೇಲ್ಮನೆ ಚುನಾವಣೆ ಸಂದರ್ಬದಲ್ಲಿ ಉತ್ತರ ಕರ್ನಾಟಕ ಭಾಗದ ವಿಜಯಪುರ ಜಿಲ್ಲೆಯನ್ನು ಬಿಜೆಪಿ ಪಕ್ಷದಿಂದ ಇಲ್ಲಿಯವರೆಗೂ ಕಡೆಗಣಿಸುತ್ತಾ ಬರಲಾಗಿದೆ ಕಳೆದ ಭಾರಿ ನಡೆದ ಚುನಾಯಿತ ಪ್ರತಿನಿಧಿಗಳ ವಿಧಾನ ಪರಿಷತ್ ಚುನಾವಣೆ ಸಂದರ್ಬದಲ್ಲಿ ಈ ಭಾರಿ ವಿಜಯಪುರ ಜಿಲ್ಲೆಯ ಬದಲು ಬಾಗಲಕೋಟೆ ಜಿಲ್ಲೆಗೆ ನೀಡುತ್ತೇವೆ ಎಲ್ಲ ಕಾರ್ಯಕರ್ತರು ಸಹಕರಿಸಬೇಕು ಎಂದು ಟಿಕೆಟ್ ಪೈಪೋಟಿಯಲ್ಲಿದ್ದ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರನ್ನು ಹಿಂದಕ್ಕೆ ಸರಿಸಿ ನಮ್ಮವರೆ ಆದ ಬಾಗಲಕೋಟೆಯ ಪಿಎಚ್ ಪೂಜಾರ ಅವರಿಗೆ ಟಿಕೆಟ್ ನೀಡಲಾಯಿತು ಆದರೆ ಕಾರ್ಯಕರ್ತರು ಪಕ್ಷ ತೆಗೆದುಕೊಂಡ ತೀರ್ಮಾನಕ್ಕೆ ಬದ್ದರಾಗಿ ಆರ್.ಎಸ್.ಪಾಟೀಲ(ಕೂಚಬಾಳ) ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಿ ಜಿಲ್ಲೆಯಿಂದ ಅತೀ ಹೆಚ್ಚು ಮತಗಳನ್ನು ಪೂಜಾರ ಅವರಿಗೆ ಕೊಡಿಸಿ ಗೆಲುವಿನಲ್ಲಿ ಕಾರ್ಯಕರ್ತರ ಕೊಡುಗೆ ಮರೆಯುವಂತಿಲ್ಲಾ ಸದ್ಯ ವಿಧಾನಸಭಾ ಸದಸ್ಯ ಬಲದ ಆಧಾರದಲ್ಲಿ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಾದರೂ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರಿಗೆ ಸಾಮಾಜಿಕ ನ್ಯಾಯದಡಿ ಟಿಕೆಟ್ ನೀಡಿ ಪಕ್ಷನಿಷ್ಠ ಕಾರ್ಯಕರ್ತರಿಗೆ ಒಂದಿಲ್ಲಾ ಒಂದು ದಿನ ಬಿಜೆಪಿ ಪಕ್ಷ ಗುರುತಿಸುತ್ತದೆ ಎಂಬುದನ್ನು ತೋರಿಸಿಕೊಡಬೇಕೆಂದು ಒತ್ತಾಯಿಸಿದ ಅವರು ಆರ್.ಎಸ್.ಪಾಟೀಲ(ಕೂಚಬಾಳ) ಅವರು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯ ಕಾರ್ಯಕರ್ತರಾಗಿ ಹೋರಾಟದ ಮೂಲಕ ಬಿಜೆಪಿ ಪಕ್ಷದ ಮುಂಚೂಣಿ ಕಾರ್ಯಕರ್ತರಾಗಿ ಗುರುತಿಸಿಕೊಂಡವರಾಗಿದ್ದಾರೆ ಮುದ್ದೇಬಿಹಾಳ ಮಂಡಲದ ಅಧ್ಯಕ್ಷರಾಗಿ ಎರಡು ಭಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಎರಡು ಭಾರಿ ಜಿಲ್ಲಾ ಅಧ್ಯಕ್ಷರಾಗಿ ಜಿಲ್ಲೆಯ ಪಕ್ಷದ ಎಲ್ಲ ಮುಖಂಡರೊಂದಿಗೆ ಮತ್ತು ಕಾರ್ಯಕರ್ತರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದವರಾಗಿದ್ದಾರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಸಾಕಷ್ಟು ಮುಖಂಡರುಗಳು ಇದ್ದರೂ ಸಹೇತ ಆರ್.ಎಸ್.ಪಾಟೀಲ(ಕೂಚಬಾಳ) ಅವರ ಸಂಘಟನಾ ಚತುರತೆ ಮತ್ತು ಪಕ್ಷ ಸಂಘಟನೆಗೆ ಅವಶ್ಯವಿರುವ ಎಲ್ಲ ತಂತ್ರಗಾರಿಕೆಯನ್ನು ಅರೀತುಕೊಂಡವರಾಗಿದ್ದರಿಂದ ದಿನದ 24 ಗಂಟೆಯೂ ಪಕ್ಷಕ್ಕಾಗಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ಸುತ್ತಾಡುವಂತಹ ಇವರನ್ನೇ ಜಿಲ್ಲಾ ಅಧ್ಯಕ್ಷರನ್ನಾಗಿ ಮುಂದುವರೆಸಿದರೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹೆಚ್ಚಿಸಬಹುದಾಗಿದೆ ಎಂಬ ಮಹಾದಾಸೆಯೊಂದಿಗೆ ಎರಡನೇ ಭಾರಿಗೂ ಅವರ ಹೆಸರನ್ನೇ ಸೂಚಿಸಿದ್ದಾರೆ ಅಂತಹ ಸಂಘಟನಾ ಚತುರತೆ ಹೊಂದಿರುವ ಆರ್.ಎಸ್.ಪಾಟೀಲ(ಕೂಚಬಾಳ) ಅವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿದ್ದೇ ಆದಲ್ಲಿ ವಿಜಯಪೂರ ಜಿಲ್ಲೆ ಅಷ್ಟೇ ಅಲ್ಲದೇ ಬಾಗಲಕೋಟ ಜಿಲ್ಲೆಯಲ್ಲಿಯೂ ಕೂಡಾ ಪಕ್ಷ ಸಂಘಟನೆ ಹೆಚ್ಚಿಸಬಹುದಾಗಿದೆ ಅದಕ್ಕಾಗಿ ಈ ಭಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಆರ್.ಎಸ್.ಪಾಟೀಲ(ಕೂಚಬಾಳ) ಅವರಿಗೆ ಟಿಕೆಟ್ ನೀಡಬೇಕೆಂಬುದು ಜಿಲ್ಲೆಯ ಎಲ್ಲ ಕಾರ್ಯಕರ್ತರ ಮಹಾದಾಸೆಯಾಗಿದ್ದು ಪಕ್ಷದ ಹೈಕಮಾಂಡ ಇವರನ್ನು ಗುರುತಿಸಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಇನ್ನೋರ್ವ ಕ್ಷತ್ರೀಯ ಮರಾಠಾ ಸಮಾಜದ ಅಧ್ಯಕ್ಷ ಹಾಗೂ ಬಿಜೆಪಿ ಪಕ್ಷದ ಹಿರಿಯ ಮುಖಂಡ ಸಂಭಾಜಿ ವಾಡಕರ ಅವರು ಮಾತನಾಡಿ ಆರ್.ಎಸ್.ಪಾಟೀಲ(ಕೂಚಬಾಳ) ಅವರು ಈಗಾಗಲೇ ಜಿಲ್ಲಾ ಅಧ್ಯಕ್ಷರಾದ ಮೇಲೆ ಎಲ್ಲ ವಿಧಾನ ಸಭಾ ಮತಕ್ಷೇತ್ರಗಳನ್ನು ಸುತ್ತಾಡಿದ್ದಾರೆ ಜಿಲ್ಲೆಯ ಎಲ್ಲ ಕಾರ್ಯಕರ್ತರ ನಾಡಿಮಿಡಿತವನ್ನು ಅರೀತುಕೊಂಡವರಾಗಿದ್ದಾರೆ ಇವರಿಗೆ ವಿಧಾನ ಪರಿಷತ್ ಚುನಾವಣೆ ಟಿಕೆ ನೀಡಿದ್ದೇ ಆದಲ್ಲಿ ಪಕ್ಷಕ್ಕೆ ಜಿಲ್ಲೆಯಲ್ಲಿ ಹೆಚ್ಚಿನ ಶಕ್ತಿ ಬರಲಿದೆ ಬಿಜೆಪಿ ಪಕ್ಷದ ಕೇಂದ್ರ ನಾಯಕರು ಮತ್ತು ರಾಜ್ಯ ನಾಯಕರು ಸಾಮಾನ್ಯ ಕಾರ್ಯಕರ್ತನಾಗಿ ಕಳೆದ 30 ವರ್ಷಗಳಿಂದಲೂ ಪಕ್ಷ ಸಂಘಟನೆಗಾಗಿ ದುಡಿದಂತಹ ವ್ಯಕ್ತಿಗೆ ಟಿಕೆಟ್ ನೀಡಲು ಮುಂದಾಗಬೇಕೆಂದರು.
ಈ ಸಮಯದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಸಲಹಾ ಸಮಿತಿ ಸದಸ್ಯ ಮಂಜುನಾಥ ಶೆಟ್ಟಿ, ತಾಲೂಕಾ ಕಾರ್ಯದರ್ಶಿ ರಾಮು ಜಗತಾಪ, ನಗರ ಘಟಕದ ಅಧ್ಯಕ್ಷ ರಾಘವೇಂದ್ರ ಚವ್ಹಾಣ, ರವಿ ಕಟ್ಟಿಮನಿ, ದೇವೇಂದ್ರ ಮನ್ಯಾಳ, ಮೊದಲಾದವರು ಇದ್ದರು.