ಸಾರ್ವಜನಿಕರ ಅಹವಾಲು ಕೇಳಿ ಸೂಕ್ತ ಮಾರ್ಗದರ್ಶನ ನೀಡಿ; ನ್ಯಾಯಾಧೀಶರ ಸಲಹೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೭: ನ್ಯಾಯಾಧೀಶರು, ನ್ಯಾಯವಾದಿಗಳು ಉತ್ತಮ ಕೆಲಸ ಮಾಡುವ ಮೂಲಕ ನ್ಯಾಯಾಲಯಗಳಿಗೆ ಆಗಮಿಸುವ ಕಕ್ಷಿದಾರರಿಗೆ ನ್ಯಾಯ ಕೊಡಿಸುವುದರೊಂದಿಗೆ ಹೆಚ್ಚು ಹೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಕರೆ ನೀಡಿದರು.ಜಿಲ್ಲಾ ವಕೀಲರ ಸಂಘ ದಾವಣಗೆರೆ ವತಿಯಿಂದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ದಾವಣಗೆರೆ ನ್ಯಾಯಾಲಯಗಳಿಗೆ ವರ್ಗಾವಣೆಗೊಂಡು ಆಗಮಿಸಿದ ನ್ಯಾಯಾಧೀಶರಿಗೆ ಸ್ವಾಗತ ಕೋರುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಕಳೆದ 3ವರ್ಷಗಳಿಂದ ನಾನು ದಾವಣಗೆರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿನ ವಕೀಲರು ಉತ್ತಮ ಸಹಕಾರ ನೀಡಿದ್ದಾರೆ. ನ್ಯಾಯಾಲಯಕ್ಕೆ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಲು ಬರುವ ಸಾರ್ವಜನಿಕರ ಅಹವಾಲನ್ನು ಕೇಳಿ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಜತೆ ನ್ಯಾಯ ಕೊಡಿಸುವಲ್ಲಿ ಮುಂದಾಗಿದ್ದಾರೆ. ಇಲ್ಲಿನ ವಕೀಲರು, ವಕೀಲರ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಾನು 3 ವರ್ಷ ಕಳೆದಿದ್ದು ಗೊತ್ತೇ ಆಗಲಿಲ್ಲ. ಇಲ್ಲಿನ ವಕೀಲರ ಸಹಕಾರದಿಂದ ಹೆಚ್ಚೆಚ್ಚು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.