ಸಿಐಡಿ ಅಧಿಕಾರಿಗಳಿಂದ ತನಿಖೆ ಆರಂಭ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.28: ಮಟ್ಕಾ ಆಡಿಸುತ್ತಿದ್ದ ಆರೋಪದ ಮೇರೆಗೆ ಪೊಲೀಸ್ ವಶದಲ್ಲಿದ್ದಾಗ ಆದಿಲ್ ಸಾವಿನ ಪ್ರಕರಣ ಸಂಬಂಧ ಚನ್ನಗಿರಿಗೆ ಭೇಟಿ ನೀಡಿರುವ ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸಿಐಡಿ ಡಿವೈಎಸ್ಪಿ ಕನಕರೆಡ್ಡಿ ನೇತೃತ್ವದ ತಂಡವು ಪೊಲೀಸ್ ಠಾಣೆಗೆ ಭೇಟಿ ನೀಡಿ ಮಹತ್ವದ ದಾಖಲೆ ಕಲೆ ಹಾಕಿದೆ.ಐವರು ಅಧಿಕಾರಿಗಳು ಆಗಮಿಸಿದ್ದು, ಪೊಲೀಸ್ ಠಾಣೆ ಮೇಲೆ ನಡೆದ ದಾಳಿ ದಿನ ಏನಾಯ್ತು? ಅದಕ್ಕಿಂತ ಮುಂಚೆ ನಡೆದ ಬೆಳವಣಿಗೆಗಳು, ಠಾಣೆಯಲ್ಲಿದ್ದ ಸಿಸಿಟಿವಿ, ಹೊರಗಡೆ ಇದ್ದ ಸಿಸಿಟಿವಿಯಲ್ಲಿನ ದೃಶ್ಯಾವಳಿಗಳನ್ನು ಕಲೆ ಹಾಕಿದೆ. ಮಾತ್ರವಲ್ಲ, ಕಲ್ಲು ತೂರಾಟ ನಡೆಸಿ ಪೊಲೀಸ್ ಜೀಪ್ ಗಳ ಹಾನಿಗೊಳಿಸಿದವರ ಗುರುತು ಪತ್ತೆ ಹಚ್ಚುವ ಕಾರ್ಯಕ್ಕೂ ಮುಂದಾಗಿದೆ. ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಅವರು ಉದ್ರಿಕ್ತರಿಗೆ ಶಾಂತಿ ಕಾಪಾಡುವಂತೆ ಕೈ ಮುಗಿದ ದೃಶ್ಯವೂ ಸಿಕ್ಕಿದೆ. ಆದಿಲ್ ಕುಟುಂಬದವರು ಇದೊಂದು ಲಾಕಪ್ ಡೆತ್ ಎಂಬ ಆರೋಪ ಮಾಡುತ್ತಿದ್ದಾರೆ. ಮಾತ್ರವಲ್ಲ, ಪೊಲೀಸರೇ ವಿಚಾರಣೆ ನೆಪದಲ್ಲಿ ಮನೆಗೆ ಬಂದು ಕರೆದುಕೊಂಡು ಹೋಗಿರುವುದಾಗಿ ಆದಿಲ್ ಪತ್ನಿ ಹೇಳಿಕೆ ನೀಡಿದ್ದರು. ಈ ಕುರಿತಂತೆಯೂ ಮಾಹಿತಿ ಕಲೆ ಹಾಕಲಿರುವ ಸಿಐಡಿ ತಂಡವು ಪೊಲೀಸರಿಗೆ ಮಾಮೂಲು ನೀಡಲಾಗುತ್ತಿತ್ತು ಎಂಬ ಆರೋಪದ ಕುರಿತಂತೆಯೂ ತನಿಖೆ ನಡೆಸಲಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚನ್ನಗಿರಿ ಪೊಲೀಸ್ ಠಾಣೆ, ಪೊಲೀಸರ ಮೇಲೆ ಕಲ್ಲು ತೂರಾಟ ಹಾಗೂ ಸರ್ಕಾರಿ ಸ್ವತ್ತುಗಳನ್ನು ಧ್ವಂಸಗೊಳಿಸಿದ ಕೃತ್ಯಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ನಾಲ್ಕು ಕೇಸ್ ಗಳ ಪೈಕಿ 25 ಆರೋಪಿಗಳನ್ನು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.