ಮಹಿಳೆಯರು ಆರೋಗ್ಯ ಬಗ್ಗೆ ಜಾಗೃತಿ, ಕಾಳಜಿ ವಹಿಸಿ
ಕಲಬುರಗಿ:ಮೇ.28: ಮಹಿಳೆಯರು ಸಂಸಾರ, ಕುಟುಂಬ, ವೃತ್ತಿ ಜೀವನದ ನಿರ್ವಹಣೆಯಲ್ಲಿ ತಮ್ಮ ಆರೋಗ್ಯದೆಡೆ ಲಕ್ಷ್ಯವಹಿಸುತ್ತಿಲ್ಲ. ಇದರಿಂದ ಅನಾರೋಗ್ಯಕ್ಕಿಡಾಗುತ್ತಿದ್ದಾರೆ. ಮಹಿಳೆಯರು ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ನಿರ್ಲಕ್ಷ್ಯ ವಹಿಸದೆ ತಜ್ಞ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ, ಸಲಹೆಗಳನ್ನು ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಹಿಳಾ ಹಿರಿಯ ತಜ್ಞ ವೈದ್ಯೆ ಡಾ.ವಿಜಯಲಕ್ಷ್ಮೀ ಬಿ.ಎಂ. ಸಲಹೆ ನೀಡಿದರು.
ನಗರದ ಎನ್.ವಿ.ಕಾಂಪೆಕ್ಸ್‍ನಲ್ಲಿರುವ ‘ಶ್ರೀವಿಜಯ ಹೋಮಿಯೋ ಕ್ಲಿನಕ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಅಂತಾರಾಷ್ಟ್ರೀಯ ಮಹಿಳಾ ಆರೋಗ್ಯ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮಾಸಿಕ ಋತುಸ್ರಾವದ ಸಮಸ್ಯೆಯಿರುವವರು, ಅದರಲ್ಲಿಯೂ ಬಿಳಿ ಸೆರಗಿನ ತೊಂದರೆಯಿಂದ ಬಳಲುತ್ತಿರುವವರು, ಆರಂಭದಲ್ಲಿಯೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದು ಮುಂದೆ ಕ್ಯಾನ್ಸರ್‍ವಾಗಿ ಪರಿವರ್ತನೆಯಾಗುತ್ತದೆ. ರಕ್ತಸ್ರಾವ, ಮೈಗ್ರೇನ್, ಅಶಕ್ತತೆಯಂತಹ ಮುಂತಾದ ಸಾಮಾನ್ಯ ಸಮಸ್ಯೆಗಳು ಮಹಿಳೆಯರಲ್ಲಿ ಕಂಡುಬರುತ್ತವೆ. ನಿಯಮಿತವಾಗಿ ಆಹಾರ, ನಿದ್ರೆ, ಶುದ್ಧವಾದ ಕುಡಿಯುವ ನೀರಿನ ಸೇವನೆ, ವಿಶ್ರಾಂತಿ, ಯೋಗ, ಧ್ಯಾನ, ವ್ಯಾಯಾಮ ಮಾಡುವ ಮೂಲಕ ಇವೆಲ್ಲವುಗಳನ್ನು ತಡೆಗಟ್ಟಬಹುದಾಗಿದೆ ಎಂದು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.
ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹವನ್ನು ಮಾಡುವ ಮೂಲಕ ಮುಂದೆ ಆಕೆಯು ಅನೇಕ ಸಮಸ್ಯೆಗಳನ್ನು ಎದುರಿಸುವ ಹಾಗೆ ಮಾಡಲಾಗುತ್ತಿದೆ. ಇದರಿಂದ ಆಕೆಯು ಬೇಗನೆ ಗರ್ಭವತಿಯಾಗಿ ಹೆರಿಗೆಯ ಸಂದರ್ಭದಲ್ಲಿ ರಕ್ತಸ್ರಾವವಾಗಿ, ಹಿಮೋಗ್ಲೋಬಿನ್ ಕೊರತೆಯಿಂದ ತಾಯಿ ಮತ್ತು ಮಗು ಇಬ್ಬರಿಗೂ ತೊಂದರೆಯಾಗಿ, ಅಂತಿಮವಾಗಿ ಸಾವು ಕೂಡಾ ಸಂಭವಿಸುವ ಸಂದರ್ಭ ಬರುತ್ತದೆ. ಇದರ ಬಗ್ಗೆ ಎಚ್ಚರ ವಹಿಸಬೇಕು. ಮಹಿಳೆಯರು ಹೆಚ್ಚಾಗಿ ಹಸಿರು ತರಕಾರಿ,ಹಣ್ಣುಗಳು, ಮೊಳಕೆ ಕಾಳುಗಳ ಸೇವನೆ ಮಾಡಬೇಕು. ನಿಯಮಿತವಾಗಿ ವಿಶ್ರಾಂತಿ ಪಡೆಯಬೇಕು. ಎಡಬದಿಯ ಮಗ್ಗಲಿಗೆ ಮಲಗುವುದು ಉತ್ತಮ. ವಿಶೇಷವಾಗಿ ಹದಿಹರಿಯದ ಹೆಣ್ಣುಮಕ್ಕಳು ಅತಿಯಾಗಿ ಮೋಬೈಲ್ ವೀಕ್ಷಣೆ, ಫಾಸ್ಟ್ ಫುಡ್ ಸೇವನೆ ಮಾಡುವುದು ಬೇಡ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಶ್ರೀವಿಜಯ ಮಾಲಿ ಪಾಟೀಲ, ದೀಪಿಕಾ ದೇಶಮುಖ, ಸಂಗೀತಾ ಬಿರಾದಾರ, ಚಿನ್ನಮ್ಮ ಮಂಗಶೆಟ್ಟಿ, ಶಿವಾನಂದ ಜೇವೂರೆ, ಖುರ್ಷಿದ ಮುಲ್ಲಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.