ಮಾತಾ ಮಾಣಿಕೇಶ್ವರಿ ಆಶ್ರಮದ ದೇವಾಲಯಗಳ ಧ್ವಂಸಕ್ಕೆ ಟ್ರಸ್ಟ್ ತಯಾರಿ
ಸೇಡಂ,ಮೇ, 28: ತಾಲೂಕಿನ ಸುಕ್ಷೇತ್ರ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಆಶ್ರಮದ ದೇವಾಲಯಗಳ ಧ್ವಂಸಕ್ಕೆ ಸದ್ಗುರು ರೂಪರಹಿತ ಅಹಿಂಸಾ ಯೋಗೇಶ್ವರ ವೀರಧರ್ಮಜಾ ಮಾತಾ ಟ್ರಸ್ಟ್ನ ಸದಸ್ಯರು ಪ್ರಯತ್ನಿಸುತ್ತಿದ್ದು, ಈ ಕುರಿತು ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಶಿವಕುಮಾರ ಅಪ್ಪಾಜಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. ಅನ್ನ, ನೀರಿಲ್ಲದೆ ಇಡೀ ಜೀವಿತಾವಧಿಯನ್ನು ಭಕ್ತರ ಉದ್ಧಾರಕ್ಕಾಗಿ ಮುಡಿಪಿಟ್ಟು, ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅಮ್ಮನವರು ತಮ್ಮ ಕೈಯ್ಯಾರೆ ಸ್ಥಾಪಿಸಿದ ದೇವಾಲಯಗಳ ನೆಲಸಮಕ್ಕೆ ಒಳಗೊಳಗೆ ಪಿತೂರಿ ನಡೆದಿದೆ. ಟ್ರಸ್ಟನ ಕಾರ್ಯದರ್ಶಿ ಶಿವಯ್ಯಸ್ವಾಮಿ ನೇತೃತ್ವದ ಕೆಲ ಸದಸ್ಯರು ಅಮ್ಮನವರು ಸ್ಥಾಪಿಸಿದ ಸಿದ್ದೇಶ್ವರ ದೇವಾಲಯ ಸೇರಿದಂತೆ ಹೀಗೆ ಅನೇಕ ದೇವಾಲಯಗಳನ್ನು ಕೋಟಿಲಿಂಗ ಸ್ಥಾಪನೆ ನೆಪದಲ್ಲಿ ಒಡೆದು ಹಾಕಲು ಮುಂದಾಗಿದ್ದಾರೆ. ಈಗಾಗಲೆ ಬೆಟ್ಟದಲ್ಲಿರುವ ದಾಸೋಹದ ಎದುರಿನ ಶ್ರೀ ಸಿದ್ದೇಶ್ವರ ದೇವಾಲಯದಲ್ಲಿನ ಲಿಂಗ ಹಾಗೂ ನಂದಿಯನ್ನು ತೆರವುಗೊಳಿಸಲಾಗಿದೆ.
ಮಾತಾ ಮಾಣಿಕೇಶ್ವರಿ ಅಮ್ಮನವರ ಆದೇಶ ಮತ್ತು ಆಶಯದಂತೆ ಯಾನಾಗುಂದಿಯ ಮಾಣಿಕ್ಯಗಿರಿಯಲ್ಲಿ ಕೋಟಿಲಿಂಗ ಸ್ಥಾಪಿಸುವ ಕೆಲಸ ಸಾಗಿದೆ. ಆದರೆ ಅದೂ ಕೂಡ ಅವೈಜ್ಞಾನಿಕ ರೀತಿಯಿಂದ ನಡೆದಿದ್ದು, ಕೋಟಿಲಿಂಗ ಸ್ಥಾಪನೆ ಹೆಸರಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರೇ ಸ್ಥಾಪಿಸಿದ ಸಿದ್ದೇಶ್ವರ ಲಿಂಗ ತೆರವುಗೊಳಿಸುವ ಅವಶ್ಯಕತೆ ಏನಿತ್ತು. ಕೋಟಿಲಿಂಗದಲ್ಲಿ ಸಿದ್ದೇಶ್ವರಲಿಂಗವೂ ಒಂದಾಗಿಸಬಹುದಲ್ಲವೆ? ಎಂದು ಅವರು ಪ್ರಶ್ನಿಸಿದ್ದಾರೆ.
ಇಡೀ ದೇಶ ವಿದೇಶದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರ ಭಕ್ತರಿದ್ದಾರೆ. ಅಮ್ಮನವರು ಲಿಂಗೈಕ್ಯರಾದ ನಂತರವೂ ಸಹ ಗುರುಪೂರ್ಣಿಮೆ ಮತ್ತು ಶಿವರಾತ್ರಿಯಂದು ಲಕ್ಷಾಂತರ ಭಕ್ತರು ಯಾನಾಗುಂದಿಯ ಮಾಣಿಕ್ಯಗಿರಿ ಬೆಟ್ಟಕ್ಕೆ ಆಗಮಿಸಿ, ದರ್ಶನ ಪಡೆಯುತ್ತಾರೆ. ಆದರೆ ಇಲ್ಲಿ ನಡೆಯುವ ಯಾವುದೇ ಸೇವೆಯಾಗಲಿ, ಕಾಮಗಾರಿಯಾಗಲಿ ಅವುಗಳ ಮಾಹಿತಿಯನ್ನು ಸಹ ಟ್ರಸ್ಟ್ನ ಕಾರ್ಯದರ್ಶಿ ಭಕ್ತರ ಮುಂದಿಡುತ್ತಿಲ್ಲ. ಮನಸೊ-ಇಚ್ಚೆ ಕೆಲಸಗಳನ್ನು ಮಾಡಿಸುವ ಮೂಲಕ ಅಮ್ಮನವರ ಆಶಯಕ್ಕೆ ಅಪಚಾರವೆಸಗುತ್ತಿದ್ದಾರೆ. ಕನಿಷ್ಠ ಕೋಟಿಲಿಂಗ ಸ್ಥಾಪನೆಯ ನೀಲನಕ್ಷೆಯನ್ನು ಸಹ ಭಕ್ತರಿಗೆ ದೊರೆಯುವಂತೆ ಮಾಡಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಬೆಟ್ಟದಲ್ಲಿ ಕೋಟಿಲಿಂಗ ಸ್ಥಾಪಿಸುವುದರಿಂದ ಬೆಟ್ಟ ಸಡಿಲವಾಗಬಹುದು ಮುಂದೆ ಅನಾಹುತಗಳಿಗೂ ಕಾರಣವಾಗಬಹುದು. ಈ ಕುರಿತು ವೈಜ್ಞಾನಿಕ ಸಲಹೆಗಳನ್ನು ಪಡೆಯುವಲ್ಲಿ ಸದ್ಗುರು ರೂಪರಹಿತ ಅಹಿಂಸಾ ಯೋಗೇಶ್ವರ ವೀರಧರ್ಮಜಾ ಮಾತಾ ಟ್ರಸ್ಟ್ ಉತ್ಸುಕತೆ ತೋರದೆ ದೇವಾಲಯಗಳನ್ನು ಧ್ವಂಸ ಮಾಡುವಲ್ಲಿ ಮುಂದಡಿ ಇಟ್ಟಿರುವುದು ಸಹಿಸುವುದಿಲ್ಲ. ಕೂಡಲೇ ಈ ಕುರಿತು ಸರಕಾರ ಮತ್ತು ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಬೇಕು ಜೊತೆಗೆ ಭಕ್ತರ ಪ್ರಾರ್ಥನೆಗೆಂದಿರುವ, ಅಮ್ಮನವರು ಸ್ಥಾಪಿಸಿದ ದೇವಾಲಯಗಳ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.