ಜಾನಪದ ಕಲೆಗಳನ್ನು ಉಳಿಸಬೇಕು: ಮಲ್ಲಿಕಾರ್ಜುನ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.28: ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ವ್ಯರ್ಥ ಮಾಡದೆ ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಕಲೆ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಅಧ್ಯಯನ ಮಾಡಬೇಕು. ನಮ್ಮ ಜಾನಪದ ಕಲೆಗಳನ್ನು ಉಳಿಸಬೇಕೆಂದು ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕರೆ ನೀಡಿದರು.
ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ರಂಗಮಂದಿರದಲ್ಲಿ ಬೆಂಗಳೂರಿನ ಲೋಕಾಯನ ಕಲ್ಚರಲ್ ಫೌಂಡೇಶನ್ ಆಯೋಜಿಸಿದ 14 ನೇ ವರ್ಷದ ಲೋಕಾಯನ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಲೋಕಾಯನ ಕಲ್ಚರಲ್ ಫೌಂಡೇಶನ್ ಆಯೋಜನೆ ಮಾಡಿ ಮಕ್ಕಳಿಗೆ ಜನಪದ ಕಲೆಗಳು, ಚಿತ್ರಕಲೆ, ಕರಕುಶಲ ಕಲೆ, ನಾಟಕದಲ್ಲಿ ಅಭಿನಯ ಸೇರಿದ ಹಾಗೆ ಅನೇಕ ರೀತಿಯ ಕಾರ್ಯಕ್ರಮವನ್ನು ಪ್ರತಿವರ್ಷದಂತೆ ಈ ವರ್ಷವೂ ಮಾಡಿಕೊಂಡು ಬಂದಿದೆ. ಈ ವರ್ಷ ಹದಿನಾಲ್ಕನೇ ಬೇಸಿಗೆ ಶಿಬಿರವನ್ನು ಯಶಸ್ವಿಯಾಗಿ ಮುಗಿಸಿದೆ. ವಿದ್ಯಾರ್ಥಿಗಳು ತಮ್ಮ ಬೇಸಿಗೆ ರಜೆಗಳನ್ನು ವ್ಯರ್ಥ ಮಾಡದೆ ಈ ರೀತಿಯ ಶಿಬಿರಗಳಲ್ಲಿ ಸೇರಿಕೊಂಡು ನಮ್ಮ ಜನಪದ ಕಲೆಗಳನ್ನು ಉಳಿಸಬೇಕು. ಮೊಬೈಲ್ ಎಂಬ ಭೂತದಿಂದ ದೂರವಿದ್ದು ಹೊಸ ಹೊಸ ಕಲೆಗಳನ್ನು ಅಭ್ಯಾಸ ಮಾಡಿ ಯಶಸ್ಸಿನ ದಾರಿಯನ್ನು ಹಿಡಿಯಬೇಕು. ಬೇಸಿಗೆ ಶಿಬಿರಗಳನ್ನು ಉಪಯೋಗಿಸಿಕೊಂಡು ಉತ್ತಮವಾದ ಜ್ಞಾನವನ್ನು ಪಡೆದುಕೊಳ್ಳಬೇಕೆಂದು ಮಲ್ಲಿಕಾರ್ಜುನ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಪೂರ್ಣಚಂದ್ರ ತೇಜಸ್ವಿ ಅವರು ನಮ್ಮ ಮಂಡ್ಯ ಜಿಲ್ಲೆಯಲ್ಲಿ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಇರುವ ರೀತಿ ಯಾವುದೇ ಊರುಗಳಲ್ಲಿ ಸುಸಜ್ಜಿತ ರಂಗಮಂದಿರ ಇಲ್ಲ. ಈ ರಂಗ ಮಂದಿರದ ಉಪಯೋಗವನ್ನು ಎಲ್ಲರೂ ಪಡೆದುಕೊಂಡು ನಮ್ಮ ಗ್ರಾಮೀಣ ಕಲೆಗಳನ್ನು ಕಲಿತು ಗ್ರಾಮೀಣ ಕಲೆಗಳನ್ನು ಉಳಿಸಬೇಕು ಎಂದರು.
ವೇದಿಕೆ ಕಾರ್ಯಕ್ರಮದ ನಂತರ ರಂಗೀಲಾಲನ ನಿಲುವಂಗಿ ಮತ್ತು ಹ್ಯಾಪಿ ಬರ್ತಡೇ ಟು ಯು ಎಂಬ ನಾಟಕಗಳನ್ನು ವಿದ್ಯಾರ್ಥಿಗಳು ಅಭಿನಯಿಸಿದರು.
ಕಾರ್ಯಕ್ರಮದಲ್ಲಿ ಲೋಕಾಯನ ಸಂಸ್ಥೆಯ ಮುಖ್ಯಸ್ಥರಾದ ಶಶಿಧರ್ ಭಾರಿಘಾಟ್, ಸಿನಿಮಾ ನಿರ್ದೇಶಕರಾದ ಉಮಾಶಂಕರ್ ಸೇರಿದಂತೆ ಅಕ್ಕಿ ಹೆಬ್ಬಾಳು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.