ನಾಟಕಗಳು ಜೀವನದ ಪ್ರತಿಬಿಂಬ:ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.28: ಪೌರಾಣಿಕ ನಾಟಕಗಳು ನಮ್ಮ ಜೀವನದ ಪ್ರತಿಬಿಂಬವಾಗಿವೆ, ಸತ್ಯಕ್ಕೆ ಎಂದಿಗೂ ಸಾವಿಲ್ಲ, ನ್ಯಾಯಕ್ಕೆ ಜಯ ಎಂಬ ಸಂದೇಶವನ್ನು ಸಾರುತ್ತಿವೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಪಟ್ಟಣದ ಪರಸಭೆಯ ಮೈದಾನದಲ್ಲಿ ಕರ್ನಾಟಕ ರತ್ನ ಡಾ. ರಾಜಕುಮಾರ್ ಸಾಂಸ್ಕೃತಿಕ ಕಲಾ ಪರಿಷತ್ ಮಂಡ್ಯ ಜಿಲ್ಲಾ ಶಾಖೆಯ ಉದ್ಘಾಟನೆ ಅಂಗವಾಗಿ ಕಲಾ ಪರಿಷತ್ತಿನ ಕಲಾವಿದರು ಅಭಿನಯಿಸಿದ ಶಿವಭಕ್ತ ಚಂಡಾಸುರ ಅಥವಾ ಹೇಮಾವತಿ ಪರಿಣಯ ಎಂಬ ಪೌರಾಣಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರಾಣಿಕ ನಾಟಕಗಳು ನಮ್ಮ ಜೀವನದ ಪ್ರತಿಬಿಂಬವಾಗಿವೆ. ನಮ್ಮ ಸುತ್ತ ಮುತ್ತಲಿನಲ್ಲಿ ವಾಸಿಸುವ ಜನರ ಜೀವನದ ಮೌಲ್ಯಗಳನ್ನು ಪಾತ್ರಧಾರಿಗಳ ಮೂಲಕ ಕಾಣುತ್ತಿರುವ ನಾವು ಸತ್ಯಕ್ಕೆ ಎಂದಿಗೂ ಸಾವಿಲ್ಲ, ಅನ್ಯಾಯ ಅಕ್ರಮಗಳು ಹೆಚ್ಚು ದಿನಗಳು ಉಳಿಯುವುದಿಲ್ಲ ಎಂಬ ಅಂಶಗಳನ್ನು ಕಾಣುತ್ತಿದ್ದೇವೆ ಎಂದು ತಿಳಿಸಿದ ಶಾಸಕ ಮಂಜು ನಾವು ಸಾಧನೆ ಮಾಡಲು ಕಷ್ಟವಾದರೂ ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಮಾರ್ಗದಲ್ಲಿಯೇ ಸಾಗುವ ಮೂಲಕ ಗುರಿ ಮುಟ್ಟೋಣ ಎಂದು ಕರೆ ನೀಡಿದರು.
ಮಹಿಳಾ ಕಲಾವಿದರು ಹಾಗೂ ಮಹಿಳಾ ಕಲಾವಿದರು ಒಗ್ಗೂಡಿ ಪ್ರದರ್ಶಿಸಿದ ನಾಟಕ ಕಲಾ ರಸಿಕರ ಮೆಚ್ಚುಗೆಗೆ ಪಾತ್ರವಾಯಿತು. ಪುರುಷ ಪಾತ್ರಗಳನ್ನು ಅಭಿನಯಿಸಿ ಮಹಿಳಾ ಕಲಾವಿದರು ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರರಾದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್, ಮುಖಂಡರಾದ ಶೀಳನೆರೆ ಮೋಹನ್, ಸಿದ್ದೇಶ್, ಬಸ್ತಿ ರಂಗಪ್ಪ, ಕಡ್ಲೆಕಾಯಿ ಕೃಷ್ಣ, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್ ಸೇರಿದಂತೆ ಹಲವರಿದ್ದರು.