ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಗಮನಹರಿಸಿ : ಲೋಕೇಶ್ ಧನಪಾಲ್
ಸಂಜೆವಾಣಿ ವಾರ್ತೆ,
ವಿಜಯಪುರ, ಮೇ.28: ಸ್ಕೀಜೋಫ್ರೇನಿಯಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರ ಚಿಕಿತ್ಸೆ ಬಗ್ಗೆ ಕುಟುಂಬದ ಸದಸ್ಯರು ಕಾಯಿಲೆಯ ಅರಿವಿನ ಕೊರತೆಯಿಂದ ಗಮನಹರಿಸುವುದಿಲ್ಲ. ಅದಕ್ಕಾಗಿ ಇಂಥ ಕಾಯಿಲೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಬೇಕು. ಇದರಿಂದ ಎಷ್ಟೋ ಕುಟುಂಬಗಳ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು 4ನೇ ಹೆಚ್ಚುವರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ ಹಾಗೂ ಪ್ರಭಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರದ ಸದಸ್ಯ ಕಾರ್ಯದರ್ಶಿ ಲೋಕೇಶ ಧನಪಾಲ್ ಹವಲೆ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರÀ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಘಟಕ ಸÀಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಂಗಣದಲ್ಲಿ ವಿಶ್ವ ಸ್ಕೀಜೋಫ್ರೇನಿಯಾ ದಿನಾಚರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಶಸ್ತ್ರಚಿಕಿತ್ಸಕÀ ಡಾ. ಶಿವಾನಂದ ಮಾಸ್ತಿಹೊಳ್ಳಿ ಮಾತನಾಡಿ, ಮಾನಸಿಕ ಖಿನ್ನತೆಯಿಂದ ಹೊರ ಬರಲು ದೈನಂದಿನ ಕೆಲಸದೊಂದಿಗೆ ಯೋಗಭ್ಯಾಸ, ಇತರೆ ಚಟುವಟಿಕೆಗಳನ್ನು ಮಾಡಬೇಕು ಎಂದು ತಿಳಿಸಿದರು.
ಮನೋವೈದ್ಯ ಡಾ. ಮಂಜುನಾಥ ಮಸಳಿ ಮಾತನಾಡಿ, ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ ಶೇ 1ರಿಂದ 5ಜನರು ಸ್ಕೀಜೋಫ್ರೇನಿಯಾದಿಂದ ಬಳಲುತ್ತಿದ್ದಾರೆ. ಯಾವುದೇ ರೀತಿಯ ಮಾನಸಿಕ ರೋಗ ಅಂದರೆ ಒಬ್ಬಂಟಿಯಾಗಿರುವುದು, ನಿದ್ರಾಹೀನತೆ, ಸರಿಯಾಗಿ ಕೆಲಸ ಮಾಡಿದಿರುವುದು, ಜಿಗುಪ್ಸೆ, ಹತಾಶೆ ಇತ್ಯಾದಿ ಲಕ್ಷಣಗಳು ಕಂಡುಬಂದಲ್ಲಿ ತಮ್ಮ ಸಮೀಪದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಉಚಿತ ಚಿಕಿತ್ಸೆಯನ್ನು ಪಡೆಯಲು ಹಾಗೂ ಉಚಿತ ಟೆಲಿ-ಮನಸ್ ದೂರವಾಣಿ ಸಂಖ್ಯೆ 14416 ಗೆ ಕರೆಮಾಡಲು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಸಂಪತ್. ಎಂ. ಗುಣಾರಿ, ಡಾ. ರಾಜೇಶ್ವರಿ ಗೋಲಗೇರಿ, ಡಾ. ಕೆ.ಡಿ. ಗುಂಡಬಾವಡಿ, ಡಾ. ಜೈಬುನ್ನಿಸಾ ಬೀಳಗಿ, ಡಾ. ಕವಿತಾ ದೊಡ್ಡಮನಿ, ಡಾ. ಅಪ್ಪಾಸಾಹೇಬ ಇನಾಮದಾರ, ಜಿ.ಎಂ.ಕೊಲ್ಲೂರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಜಿಲ್ಲಾ ಮಾನಸಿಕ ಕಾರ್ಯಕ್ರಮ ಸಿಬ್ಬಂದಿಗಳು, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಸಿಬ್ಬಂದಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.