ಎಸ್‍ಎಸ್‍ಎಲ್‍ಸಿ ಫಲಿತಾಂಶ ಕುಸಿತ ಆತ್ಮಾವಲೋಕನ ಅಗತ್ಯ: ಡಾ. ಪೆರ್ಲ
ಕಲಬುರಗಿ:ಮೇ.27: ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಫಲಿತಾಂಶ ಕುಸಿತದ ಕುರಿತು ಎಲ್ಲರೂ ಆತ್ಮಾವಲೋಕನ ಮಾಡುವ ಅಗತ್ಯವಿದೆಯೆಂದು ಆಕಾಶವಾಣಿ ನಿವೃತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ್ ಪೆರ್ಲ ಅವರು ಸಲಹೆ ನೀಡಿದರು.
ನಗರದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘ ಎಸ್‍ಎಸ್‍ಎಲ್‍ಸಿ ಮತ್ತು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ಫಲಿತಾಂಶದ ಹಿನ್ನಡೆಗೆ ಶಿಕ್ಷಣ ಇಲಾಖೆಯನ್ನು ಮಾತ್ರ ಬೊಟ್ಟು ಮಾಡದೆ ಶಿಕ್ಷಕರು ಪಾಲಕರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಜಂಟಿಯಾಗಿ ಚಿಂತನೆ ಮಾಡಿ ಫಲಿತಾಂಶದ ಹೆಚ್ಚಳದ ಬಗ್ಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದು ಅತ್ಯಂತ ಅಗತ್ಯ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶಿಕ್ಷಣದ ಉನ್ನತಿಗೆ ತಜ್ಞರ ತಂಡವನ್ನು ರಚಿಸಿ ಶಿಕ್ಷಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಫಲಿತಾಂಶ ವರ್ಧನೆಗೆ ನೀಲ ನಕಾಶೆ ರಚಿಸಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಈಗಾಗಲೇ ವಿದ್ಯಾರ್ಥಿಗಳಿಗೆ ಕಲಿಕಾಸರೆ ಪೂರಕ ಪಠ್ಯ ಪುಸ್ತಕ ವಿತರಿಸಿ ಫಲಿತಾಂಶ ವರ್ಧನೆಗೆ ಶ್ರಮಿಸಿದೆ. ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘದಂತಹ ಸ್ವಯಂ ಸೇವಾ ಸಂಘಟನೆಗಳು ಕೈಜೋಡಿಸುವುದು ಅಗತ್ಯ. ಎಸ್‍ಎಸ್‍ಎಲ್‍ಸಿ- ಪಿಯುಸಿ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿರುವುದು ಹೆಮ್ಮೆಯ ಸಂಗತಿ. ಸಾಧಕರು ಉತ್ತಮ ಭವಿಷ್ಯ ರೂಪಿಸಿ ಸಮಾಜಮುಖಿಯಾಗಿ ಕೊಡುಗೆ ನೀಡುವ ಜವಾಬ್ದಾರಿ ಇದೆ ಎಂದು ಅವರು ಹೇಳಿದರು.
ನಿವೃತ್ತ ಪ್ರಿನ್ಸಿಪಾಲ್ ಅಲ್ಲಾವುದ್ದೀನ್ ಸಾಗರ್ ಅವರು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳ ಜೊತೆ ಕಡಿಮೆ ಫಲಿತಾಂಶ ಪಡೆದವರ ಬಗ್ಗೆ ಕೂಡ ಗಮನ ಕೊಡಬೇಕು. ಮಾನವೀಯ ಗುಣದಿಂದ ವಿದ್ಯಾರ್ಥಿಗಳು ಭವಿಷ್ಯ ಕಂಡುಕೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸಲು ಅಧ್ಯಾಪಕರು ನಿರಂತರ ಜ್ಞಾನ ವೃದ್ಧಿಗೆ ಆಸಕ್ತಿ ವಹಿಸಬೇಕು ಎಂದರು. ನೌಕರರ ಸಂಘದ ಉಪಾಧ್ಯಕ್ಷ ಡಾ. ಅಸ್ಲಾಂ ಸಯೀದ್ ಅವರು ಮಾತನಾಡಿ, ಇಂಜಿನಿಯರ್ ಹಾಗು ವೈದ್ಯರಷ್ಟೇ ಆಗುವ ಕನಸು ಬಿಟ್ಟು ಆಡಳಿತ ರಂಗ ಸೇರಿದಂತೆ ಇತರ ಕ್ಷೇತ್ರಗಳಿಗೆ ಪ್ರವೇಶ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ಎಸ್‍ಎಸ್‍ಎಲ್‍ಸಿಯ 23 ಹಾಗು ಪಿಯುಸಿಯ 12 ವಿದ್ಯಾರ್ಥಿಗಳಿಗೆ ಪ್ರಮಾಣ ಪಾತ್ರ, ಸ್ಮರಣಿಕೆ ಶಾಲು ಹಾರ ನೀಡಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಸಯ್ಯದ್ ನಾರುದ್ದೀನ್ ಮುತಾವಲಿ ಅವರು ಅಧ್ಯಕ್ಷತೆ ವಹಿಸಿದ್ದರು ಗೌರವಾಧ್ಯಕ್ಷ ಡಾ. ಎಂ.ಎಂ. ಬೇಗ್, ಕಾರ್ಯಾಧ್ಯಕ್ಷ ಅಸದ್ ಅಲಿ ಅನ್ಸಾರಿ ಅವರು ಉಪಸ್ಥಿತರಿದ್ದರು. ಕಾರ್ಯದರ್ಶಿ ನವಾಬ್ ಖಾನ್ ಅವರು ಕಾರ್ಯಕ್ರಮ ನಿರೂಪಿಸಿದರು. ಖಾಜಾ ಮೊಹ್ಮದ್ ಗೇಸುದರಾಜ್ ಅವರು ಪ್ರಾರ್ಥನಾಗೀತೆ ಹಾಡಿ ಸ್ವಾಗತಿಸಿದರು.