ಪ್ರಾದೇಶಿಕ ಪಠ್ಯ ರಚನೆ ಕಾರ್ಯಾಗಾರ
ಕಲಬುರಗಿ:ಮೇ.27: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಹಾಗೂ ಕರ್ನಾಟಕ ಸರಕಾರದ ರಾಜ್ಯ ಶಿಕ್ಷಣ ನೀತಿ ಆಯೋಗ ಇವುಗಳ ಸಹಯೋಗದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ “ಪ್ರಾದೇಶಿಕ ಮಟ್ಟದ ಪಠ್ಯಕ್ರಮ ರಚನೆ” ಕುರಿತು ಕಾರ್ಯಾಗಾರವನ್ನು ಮೇ 28, ರಂದು ಬೆ. 10 ಗಂಟೆಗೆ ಆಯೋಜಿಸಲಾಗಿದೆ.
ಶಾಲೆ ಮತ್ತು ಉನ್ನತ ಶಿಕ್ಷಣದ ಪ್ರವೇಶ ಮತ್ತು ಗುಣಮಟ್ಟವನ್ನು ಸುಧಾರಣೆ ಕ್ರಮ ಪರಿಶೀಲಿಸಲು ಕರ್ನಾಟಕ ರಾಜ್ಯ ಸರ್ಕಾರವು ಪ್ರೊ. ಎಸ್. ಕೆ. ಥೋರಟ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ಆಯೋಗವನ್ನು ರಚಿಸಲಾಗಿತ್ತು.
ಆಯೋಗದ ಶಿಫಾರಸಿನ ಮೇರೆಗೆ ಕರ್ನಾಟಕ ಸರ್ಕಾರವು ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಗುಣಮಟ್ಟವನ್ನು ಪರಿಷ್ಕರಿಸಲು ಮೂರು ವರ್ಷಗಳ ಪದವಿ ಪೂರ್ವ ಪಠ್ಯಕ್ರಮದ ವಿಸ್ತ್ರತ ಚೌಕಟ್ಟಿನ ಮೇಲೆ ಆಯೋಗವು ಸರ್ಕಾರದ ನೀತಿಯ ಅನುಷ್ಠಾನದ ಕಾರ್ಯತಂತ್ರದ ಭಾಗವಾಗಿ, ಪಾಲುದಾರರಾದ ಕುಲಪತಿಗಳು, ಶಿಕ್ಷಕರ ಸಂಘಗಳು, ಪ್ರಾಂಶುಪಾಲರು ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿ ಸಂಘಟನೆಗಳ ಸಹಕಾರದಲ್ಲಿ ನಾಲ್ಕು ಪ್ರಾದೇಶಿಕ ಕಾರ್ಯಾಗಾರಗಳನ್ನು ನಡೆಸಿ ಚರ್ಚಿಸಲು ವಿವಿಧ ವಿಭಾಗಗಳ ಅಧ್ಯಕ್ಷರು, ಡೀನರುಗಳು, ಮುಖ್ಯಸ್ಥರೊಂದಿಗೆ ರಾಜ್ಯ ಶಿಕ್ಷಣ ನೀತಿ ಆಯೋಗವು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಸಹಯೋಗದಲ್ಲಿ ಮೇ 28 ರಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ, ಮೇ 30 ರಂದು ರಾಣಿ ಚನಮ್ಮ ವಿಶ್ವವಿದ್ಯಾಲಯದಲ್ಲಿ, ಜೂನ್ 5 ರಂದು ಮಂಗಳೂರು ಮತ್ತು ಜೂನ್ 7, 2024 ರಂದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ
ಪ್ರಾದೇಶಿಕ ಕಾರ್ಯಾಗಾರಗಳನ್ನು ನಡೆಸಲುಈಗಾಗಲೇ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.
ಪಠ್ಯಕ್ರಮದ ಪುನರ್ ರಚನೆಗೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವುದು ಮತ್ತು ಅದರ ಪ್ರಸ್ತುತತೆ, ಉದ್ಯೋಗಾವಕಾಶ, ಅನ್ವಯಿಕ ಜ್ಞಾನದಂತಹ ಬಹು ಉದ್ದೇಶಗಳನ್ನು ಪೂರೈಸಲು ಪಠ್ಯಕ್ರಮವನ್ನು ವಿನ್ಯಾಸಗೊಳಿಸಲು ಎಲ್ಲಾ ವಿಶ್ವವಿದ್ಯಾಲಯಗಳ ವಿಭಾಗಗಳ ಅಧ್ಯಯನ ಮಂಡಳಿಗಳನ್ನು ಸಕ್ರಿಯಗೊಳಿಸಿ ವೃತ್ತಿ ಕೌಶಲ್ಯ, ಸಾಂವಿಧಾನಿಕ ಮೌಲ್ಯಗಳು, ಸೃಜನಶೀಲ ಮತ್ತು ವಿಮರ್ಶಾತ್ಮಕ ಪ್ರಜ್ಞೆ, ಬಹುಶಿಸ್ತೀಯ, ಇತ್ಯಾದಿ ವಿಷಯಗಳನ್ನು ಒಳಗೊಂಡ ಅಂಶಗಳನ್ನು ಸಮಗ್ರವಾಗಿ ಚರ್ಚಿಸುವುದು
ಕಾರ್ಯಾಗಾರಗಳ ಉದ್ದೇಶಗಳಾಗಿದೆ.