ಬೆಳಕೇರಾ: ಅಕ್ರಮವಾಗಿ ಕೆಮ್ಮಣ್ಣು ಸಾಗಾಟ
ಚಿಟಗುಪ್ಪ,ಮೇ.27-ತಾಲೂಕಿನಲ್ಲಿ ಕೆಂಪು ಮಣ್ಣು ಅಕ್ರಮ ಸಾಗಾಟ ಅವ್ಯಹತವಾಗಿ ಜರುಗುತ್ತಿದ್ದು ಸಂಬಂಧಪಟ್ಟ ಎಲ್ಲ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆ ಹೆದ್ದಾರಿ, ಲೇಔಟ್‍ಗಳ ನಿರ್ಮಾಣದಲ್ಲಿ ಬಳಕೆಯಾಗುವ ಮತ್ತು ದುಬಾರಿ ದರದಲ್ಲಿ ಮಾರಾಟವಾಗುವ ಕೆಂಪು ಮಣ್ಣನ್ನು ಯಾವುದೇ ಅನುಮತಿ ಇಲ್ಲದೆ ಮಾರಾಟ ಮಾಡುತ್ತಿದ್ದು ಸರ್ಕಾರದ ಲಕ್ಷಾಂತರ ರೂಪಾಯಿ ರಾಜಸ್ವ ಸೋರಿಕೆಯಾಗುತ್ತಿದೆ.
“ತಾಲೂಕು ಕೇಂದ್ರ ಚಿಟಗುಪ್ಪ ಪಟ್ಟಣದ ಪಕ್ಕದಲ್ಲಿರುವ ಬೆಳಕೇರಾ ಗ್ರಾಮದ ತೊರೆಯ ಪಕ್ಕದಲ್ಲಿನ ಸುಮಾರು ಐದಾರು ಎಕ್ರೆ ಪ್ರದೇಶದಲ್ಲಿ ನಿರಂತರವಾಗಿ ಅಕ್ರಮವಾಗಿ ಕೆಂಪು ಮಣ್ಣು ಸಾಗಾಟ ಜರುಗುತ್ತಿದೆ.
ಕೆಂಪು ಮಣ್ಣು ಮಾರಾಟ ಮಾಡಬೇಕಾದರೆ ಗಣಿ ಮತ್ತು ಭೂ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಮಣ್ಣು ಖಾಸಗಿ ವ್ಯಕ್ತಿಯ ಜಮೀನಿನಲ್ಲಿದ್ದರೂ ಸರ್ಕಾರಕ್ಕೆ ರಾಯಲ್ಟಿ ಹಣ ಕಟ್ಟಬೇಕಾಗುತ್ತದೆ. ಆದರೆ ಇಲ್ಲಿ ಯಾವುದೇ ನಿಯಮಗಳನ್ನು ಅನುಸರಿಸಿಲ್ಲ. ಗ್ರಾಮಕ್ಕೆ ಹೊಂದಿಕೊಂಡು ಇಂತಹ ಅಕ್ರಮ ಮಣ್ಣು ಸಾಗಾಟ ಜರುಗುತ್ತಿದ್ದರೂ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿಲ್ಲ.
ಇದಕ್ಕೂ ಮುಂಚೆ ಸಂಬಂಧಪಟ್ಟ ಹೊಲದ ಮಾಲೀಕರಿಗೆ ನೋಟಿಸ್ ನೀಡಿದ್ದೇನೆ ಎಂದು ಕಳೆದ 15 ದಿನಗಳಿಂದ ಯಾಮಾರಿಸುತ್ತಿರುವ ಗ್ರಾಮ ಲೆಕ್ಕಗ ಇಲ್ಲಿಯವರೆಗೆ ಆ ನೋಟಿಸ್ ತೋರಿಸುತ್ತಿಲ್ಲ. ಮಣ್ಣು ಸಾಗಾಟಗಾರರು ಮತ್ತು ಗ್ರಾಮ ಲೆಕ್ಕಗ ಶಾಮೀಲಾಗಿ ಈ ಅವ್ಯವಹಾರ ಮಾಡುತ್ತಿದ್ದಾರೆ” ಎಂದು ರಾಜಶೇಖರ್ ಎಚ್. ಮಾಚಕೂರಿ ಆರೋಪಿಸಿದ್ದಾರೆ.
ಕೂಡಲೇ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.