ಭೀಮಾನದಿತೀರ ಸ್ವಚ್ಛಗೊಳಿಸಿದ ಯುವಾಬ್ರಿಗೇಡ್
ಕಲಬುರಗಿ,ಮೇ 27: ಯುವಾಬ್ರಿಗೇಡ್ ಕಲಬುರಗಿ ವತಿಯಿಂದ ಅಫಜಲಪುರ ತಾಲೂಕಿನ ಘತ್ತರಗಿ ಭೀಮಾನದಿ ಸ್ವಚ್ಚತಾ ಕಾರ್ಯ ಮಾಡಲಾಯಿತು. ಭೀಮಾನದಿ ತೀರದಿಂದ 15-20 ಟ್ರಾಕ್ಟರ್‍ಭರ್ತಿ ಸುಮಾರು 30 ಟನ್ ಗೂ ಅಧಿಕದಷ್ಟು ತ್ಯಾಜ್ಯವನ್ನು ಜೀವಜಲ ಭೀಮೆಯಿಂದ ಹೊರತೆಗೆಯಲಾಯಿತು.
ರವಿವಾರ ಬೆಳಿಗ್ಗೆ ಸುಮಾರು 50 ಕ್ಕೂ ಹೆಚ್ಚು ಯುವಾ ಕಾರ್ಯಕರ್ತರು ಸೇರಿ ಭೀಮಾನದಿ ಸ್ವಚ್ಛತೆಗೆ ಇಳಿದರು. ಕಳೆದ ಬಾರಿ 500 ಕ್ಕಿಂತ ಹೆಚ್ಚು ಕಾರ್ಯಕರ್ತರೊಂದಿಗೆ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಸ್ವಚ್ಛತೆ ಮಾಡಲಾಗಿತ್ತು. ಸ್ವಚ್ಛತೆ ಮಾಡಿ ಐದೇ ವರ್ಷದಲ್ಲಿ ಮತ್ತೆ ಅದೇ ಸ್ಥಿತಿಗೆ ತಲುಪಿರುವದು ಶೋಚನೀಯವಾಗಿತ್ತು.
ನದಿಯಿಂದ ತ್ಯಾಜ್ಯ ವಸ್ತು ತೆಗೆಯುವದು ಅಷ್ಟು ಸುಲಭವೂ ಆಗಿರಲಿಲ್ಲ. 5 ವರ್ಷದಿಂದ ಕೂಡಿದ್ದ ಬಟ್ಟೆ-ಬರೆ , ದೇವರಪೆÇಟೋ, ಜೊತೆಗೆ ಅದರ ಪುಡಿಯಾದ ಗಾಜಿನ ಚೂರುಗಳು ಕಸಕಡ್ಡಿ ಮತ್ತು ತೆಂಗಿನಕಾಯಿಗಳ ರಾಶಿಯೇ ನದಿಯಲ್ಲಿ ತುಂಬಿತ್ತು. ಒಂದಷ್ಟು ಕಾರ್ಯಕರ್ತರಿಗೆ ಗಾಜಿನ ಚೂರು ಚುಚ್ಚಿದರೂ ಎದೆಗುಂದದೆ ಅವರು ಮುಂದುವರಿಸಿದ ಕೆಲಸವನ್ನು ನೋಡಿದರೆ ಎಂತವರಿಗಾದರೂ ಹುರುಪು ಮೂಡುತ್ತಿತ್ತು. ಇನ್ನು ಕೆಲಸ ಬಾಕಿ ಉಳಿದಿದೆ, ಮುಂದಿನ ದಿನಗಳಲ್ಲಿ ಮುಗಿಸುವ ಗುರಿಧ್ಯೇಯ ಹೊಂದಲಾಗಿದೆ ಎಂದು ಕಾರ್ಯಕರ್ತರು ತಿಳಿಸಿದರು.ಸ್ವಚ್ಛತಾ ಕಾರ್ಯದಲ್ಲಿ ಕಲಬುರಗಿ, ವಿಜಯಪುರ, ಬೀದರ ಜಿಲ್ಲೆಯ ಕಾರ್ಯಕರ್ತರು ಭಾಗವಹಿಸಿದರು. ನಾವು ನದಿಗಳನ್ನು ಕೇವಲ ಜಲಮೂಲಗಳನ್ನಾಗಿ ನೋಡಲಿಲ್ಲ, ಬದಲಾಗಿ ಜೀವ ನೀಡುವ ದೇವರು ಎಂದೇ ಭಾವಿಸುತ್ತೇವೆ.ಇಂತಹ ಜೀವನದಿಯ ಒಡಲು ಇಂದು ಖಾಲಿಯಾಗಿದೆ. ಮತ್ತು ಮಲೀನವಾಗಿದೆ ಭೀಮೆಯ ಒಡಲನ್ನು ಸ್ವಚ್ಛಗೊಳಿಸಿ ಅದಕ್ಕೆ ಕೃತಜ್ಞತೆ ಸಲ್ಲಿಸುವ ಅವಕಾಶ ಇಂದು ನಮ್ಮೆಲ್ಲರದ್ದಾಗಿತ್ತು ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.