ಪದವಿ, ಪ್ರಶಸ್ತಿಗಿಂತ ಕೃತಿಯ ಮೌಲ್ಯ ಮಾತಾಡಬೇಕು:ನಿಷ್ಠಿ ರುದ್ರಪ್ಪ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ:ಸೆ.24 ಪದವಿ ಮತ್ತು ಪ್ರಶಸ್ತಿಗಾಗಿ ಪುಸ್ತಕಗಳನ್ನು ಪ್ರಕಟಿಸುವದಕ್ಕಿಂತ ಸಾಹಿತ್ಯ ಮೌಲ್ಯ ಸಮಾಜದ ನೋವುಗಳಿಗೆ ಮಿಡಿಯುವ ಅಕ್ಷರಗಳಾಗಲಿ ಎಂದು ಅಖಂಡ ಬಳ್ಳಾರಿ ಜಿಲ್ಲೆಯ ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅಭಿಪ್ರಾಯ ಪಟ್ಟರು.
ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪ.ಪೂ.ಕಾಲೇಜ್ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಆಹ್ವಾನ ಪ್ರಕಾಶನ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ, ಹಿರಿಯ ಸಾಹಿತಿ ಬಾಚಿಗೊಂಡನಹಳ್ಳಿ ಹುರುಕಡ್ಲಿ ಶಿವಕುಮಾರ್‍ರವರು ರಚಿಸಿದ ‘ಕನ್ನಡಮೆನಿಪ್ಪಾ ನಾಡು’ ಎನ್ನುವ ಕವನ ಸಂಕಲನ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.ವ್ಯಕ್ತಿತ್ವ ಇಲ್ಲದವರು ಜಗತ್ತಿನಲ್ಲಿ ಐಡಂಟಿಗೋಸ್ಕರ ಹಂಬಲಿಸುತ್ತಿದ್ದಾರೆ.ಎಲ್ಲಾರೂ ನನ್ನ ಗುರುತಿಸಲು ಮಾನ ದಂಡವೆಂದರೆ ನಮ್ಮ ಕೃತಿಗಳು ಮಾತಾಡಬೇಕು. ಇತ್ತೀಚಿನ ದಿನಗಳಲ್ಲಿ ಮನುಷ್ಯರೆಲ್ಲ ಪ್ರಾಣಿಗಳಾಗುತ್ತಿದ್ದಾರೆ.
ಮೊಬೈಲ್‍ಗಳಿಗೆ ಗಂಟುಬಿಟ್ಟು, ದೂರದರ್ಶನದಲ್ಲಿ ಬರುತ್ತಿರುವ ಶ್ರೀಮಂತಿಕೆಯ ಧಾರವಾಹಿಗಳಿಗೆ ಜೋತುಬಿದ್ದು ಮನುಷ್ಯ ತನ್ನತನವನ್ನೇ ಮರೆಯುತ್ತಿದ್ದಾರೆ. ಆದರೆ, ಇಂತಹ ಸಮಾಜದಲ್ಲಿನ ನೋವುಗಳನ್ನು  ಸಾಹಿತಿ ಹುರುಕಡ್ಲಿ ಶಿವಕುಮಾರ್ ಬರೆದಿರುವ ನೇರಾನೇರ ಕವನ ಸಂಕಲನಗಳನ್ನೊ ಒಮ್ಮೆ ಓದಿ, ಕ್ರೂರಿ ಮನುಷ್ಯನನ್ನು, ನಿಜವಾದ ಮನುಷ್ಯರನ್ನಾಗಿ ಬದಲಾಯಿಸುತ್ತವೆ ಎಂದರು.
ಕಾಲೇಜ್‍ನ ಪ್ರಾಂಶುಪಾಲರಾದ ದುರುಗಪ್ಪ ಅಧ್ಯಕ್ಷತೆ ವಹಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯು ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು.ಹೊಟ್ಟೆಯ ಹಸಿವಿಗಿಂತ ನೆತ್ತಿಯ ಹಸಿವು ಜಾಸ್ತಿ ರೂಡಿಸಿಕೊಳ್ಳಬೇಕು. ಬೇರೆ ಚಟಗಳನ್ನು ಮೈಗೂಡಿಸಿಕೊಂಡರೆ ಜೀವನವನ್ನು ಆಳುಮಾಡುತ್ತಾವೆ. ಇಂತಹ ಸಾಹಿತ್ಯಿಕ ಓದು, ಅಕ್ಷರ ಬಂಡಾರದೊಂದಿಗೆ ಸಮಾಜದಲ್ಲಿ ತಲೆ ಎತ್ತಿ ನಡೆಯುವ ಜೀವನ ಪಾಠಕಲಿಸಿಕೊಡುತ್ತಾವೆ ಎಂದರು.
ಪುಸ್ತಕ ಪ್ರಕಾಶಕರಾದ ಬಸರಕೋಡಿನ ಮೇಟಿ ಕೊಟ್ರಪ್ಪನವರು ಪ್ರಾಸ್ತಾವಿಕವಾಗಿ, ನಮ್ಮ ಆಹ್ವಾನ ಪ್ರಕಾಶನದಿಂದ ಇದು 10ನೇ ಪುಸ್ತಕವಾಗಿದ್ದು, 25 ಪುಸ್ತಕಗಳನ್ನು ಹೊರತರುವ ಗುರಿಯನ್ನು ಹೊಂದಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು.
ಕಸಾಪ ತಾಲೂಕು ಅಧ್ಯಕ್ಷ ಗೂಳಪ್ಪ ಹುಲಿಮನಿ ಪುಸ್ತಕ ಪರಿಚಯ ಮಾಡಿಕೊಟ್ಟರು. ಉಪನ್ಯಾಸಕರಾದ ಅಕ್ಕಿ ಬಸವೇಶ, ಪುಸ್ತಕ ಲೇಖಕರು ಮತ್ತು ಸಾಹಿತಿಗಳಾದ ಹುರುಕಡ್ಲಿ ಶಿವಕುಮಾರು ಮಾತನಾಡಿದರು.
ಈ ಸಂದರ್ಭದಲ್ಲಿ ತಂಬ್ರಹಳ್ಳಿ ಹೋಬಳಿ ಕಸಾಪ ಅಧ್ಯಕ್ಷ ಎಸ್.ವಿ.ಪಾಟೀಲ್, ಸಾಹಿತಿಗಳಾದ ಎ.ಆರ್.ಪಂಪಣ್ಣ, ಎಚ್.ಎಂ.ಕೊಟ್ರಯ್ಯ, ಉಪ್ಪಾರ್ ಬಸಪ್ಪ, ರಾಮನಮಲಿ, ರವೀಂದ್ರ, ಗಣೇಶ ಹವಲ್ದಾರ್, ವಿ.ಬಿ.ಮಲ್ಲೇಶಪ್ಪ, ವೀರಣ್ಣ ಕಲ್ಮನಿ, ಯು.ಬಸವರಾಜ, ಉಪನ್ಯಾಸಕರಾದ ಸುಧಾಚಿದಾನಂದಗೌಡ, ಕೆ.ಬಿ.ಎಂ.ನಾಗಲಿಂಗಸ್ವಾಮಿ ಹಾಗೂ ಶಿಕ್ಷಕ ರೆಡ್ಡಿನಾಯ್ಕ್ ಮತ್ತಿತರರು ಇದ್ದರು.ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಎಸ್.ಮಂಗಳ ಪ್ರಾರ್ಥಿಸಿದರು. ಉಪನ್ಯಾಸಕರಾದ ಡಾ.ಉಮಾ, ಅಬ್ದುಲ್ ನಿಸಾರ್, ಹುರುಕಡ್ಲಿ ಮಹೇಶ್ವರ ನಿರ್ವಹಿಸಿದರು.