ಎಚ್‌ಐವಿ-ಏಡ್ಸ್ ಕುರಿತು ಜಾಗೃತಿ ಅಗತ್ಯ- ಡಾ.ದೀಪಕ್ ರೈ; ಕಾಲ್ನಡಿಗೆ ಜಾಥಾ-ಬೀದಿನಾಟಕ ಪ್ರದರ್ಶನ

ಪುತ್ತೂರು: ನಮ್ಮ ಬದುಕನ್ನು ಆರೋಗ್ಯಕರವಾಗಿಸಲು ಹಾಗೂ ಕೆಲವೊಂದು ಅಪನಂಬಿಕೆಗಳನ್ನು ದೂರ ಮಾಡಲು ಎಚ್‌ಐವಿ-ಏಡ್ಸ್ ಕುರಿತು ಜಾಗೃತಿ ಅತೀ ಅಗತ್ಯವಾಗಿ ಮೂಡಿಸಬೇಕಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಹಾಗೂ  ಜೀವನಶೈಲಿಯ ಬದಲಾವಣೆಯತ್ತ ನಮ್ಮ ದೃಷ್ಠಿ ಸಾಗಬೇಕಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಹೇಳಿದರು.
ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಪುತ್ತೂರು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ವಿಭಾಗ ಪುತ್ತೂರು, ಹಿಂದ್ ಕುಷ್ಠ ನಿವಾರಣಾ ಸಂಘ ಮಂಗಳೂರು ಮತ್ತು ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇದರ ಸಹಯೋಗದಲ್ಲಿ ಸೋಮವಾರ ಪುತ್ತೂರು ಸಂತೆ ಮಾರುಕಟ್ಟೆಯಲ್ಲಿ ನಡೆದ ಹೆಚ್‌ಐವಿ-ಎಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಕಾಲ್ನಡಿಗೆ ಜಾಥಾಕ್ಕೆ ತಮಟೆ ಬಾರಿಸಿ ಮೂಲಕ ಚಾಲನೆ ನೀಡಿದರು.
ಕಿಲ್ಲೆ ಮೈದಾನ ಸಂತೆಯಲ್ಲಿ ವಿವಿಧ ಜಾಗೃತಿ ಪ್ರದರ್ಶನ: ಆರೋಗ್ಯ ಇಲಾಖೆಯಿಂದ ಹೊರಟ ಜಾಥಾವು ತಾಲೂಕು ಆಡಳಿತ ಸೌಧದ ಬಳಿಯಿಂದ ಪುತ್ತೂರು ಕಿಲ್ಲೆ ಮೈದಾನದ ಸಂತೆ ಮಾರುಕಟ್ಟೆಗೆ ಬಂದು ಅಲ್ಲಿ ಏಡ್ಸ್ ಕುರಿತ ಜಾಗೃತಿ ನೃತ್ಯ, ಬೀದಿನಾಟಕ ಪ್ರದರ್ಶನ ಮಾಡಲಾಯಿತು. ಸಂತೆಯಲ್ಲಿನ ವ್ಯಾಪಾರಿಗಳಿಗೆ, ಗ್ರಾಹಕರಿಗೆ ಕರಪತ್ರ ಹಂಚಿಕೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಸರ್ಕಾರಿ ಆಸ್ಪತ್ರೆಯಿಂದ ರಕ್ತಪರೀಕ್ಷೆಯೂ ನಡೆಯಿತು. ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಗೋಪಾಲಕೃಷ್ಣ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸ್ಮಿತಾರಾಣಿ, ಕಾಲೇಜಿನ ಎನ್‌ಎಸ್‌ಎಸ್ ಘಟಕದ ಅಧಿಕಾರಿಗಳಾಗಿರುವ ಡಾ.ಸುಕೇಶ್ ಮತ್ತು ಶ್ರೀನಾಥ್, ಉಪನ್ಯಾಸಕ ಅಬ್ದುಲ್ ಕುಂಞಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ತಾರಾನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಚಿಂತನ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು. ಚೈತನ್ಯ ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಇಲಾಖೆಯ ಶಿಕ್ಷಣಾಧಿಕಾರಿ ಪದ್ಮಾವತಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನಿಶಾ, ಆಶಾ ಕಾರ್ಯಕರ್ತೆ ಗೀತಾ, ಆಪ್ತಸಮಾಲೋಚನಕಾರರಾದ ಲಾವಣ್ಯ, ಮೀನಾಕ್ಷಿ, ಟೆಕ್ನಿಷಿಯನ್ ಪೂರ್ಣಿಮಾ ಭಾಗಿಯಾಗಿದ್ದರು.