ಇದೊಂದು ಪೂರ್ವನಿಯೋಜಿತ ಕೃತ್ಯ: ಮಾಡಾಳ್ ವಿರೂಪಾಕ್ಷಪ್ಪ ಆರೋಪ
ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೭; ಚನ್ನಗಿರಿ ಇತಿಹಾಸದಲ್ಲಿ ಎಂದೆಂದೂ ನಡೆಯದಂತ ಅಹಿತಕರ ಘಟನೆ ನಡೆದಿದೆ. ಇದೊಂದು ಪೂರ್ವನಿಯೋಜಿತ ಕೃತ್ಯ. ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಯಾರನ್ಮೋ ಮೆಚ್ಚಿಸಲುಬಂಧಿಸುವ ಬದಲು ನೈಜ ಆರೋಪಿಗಳನ್ನು ಬಂಧಿಸಿ, ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.
ಚನ್ನಗಿರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚನ್ನಗಿರಿ ತಾಲೂಕಿನ ಇತಿಹಾಸದಲ್ಲಿ ಇದೊಂದು ಕಪ್ಪುಚುಕ್ಕೆ. ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ 11 ಪೊಲೀಸರಿಗೆ ಹಲ್ಲೆ ಆಗಿರುವುದು ಖಂಡನೀಯ.ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚನ್ನಗಿರಿಯಲ್ಲಿ ಇಂಥ ಘಟನೆ ನಡೆದಿದೆ. ರಕ್ಷಣೆ ನೀಡಬೇಕಾದ ರಕ್ಷಕರಿಗೆ ರಕ್ಷಣೆ ಇಲ್ಲ ಎನ್ನುವುದಾದರೆ ಚನ್ನಗಿರಿ ತಾಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಾವ ರೀತಿ ಇದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಇದರ ಬಗ್ಗೆ ಆಲೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು.ರಾಜ್ಯ ಮಟ್ಟದಲ್ಲಿಯೂ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಡಿವೈಎಸ್ಪಿ, ಸರ್ಕಲ್ ಇನ್ ಸ್ಪೆಕ್ಟರ್ ಅವರನ್ನು ಸಸ್ಪೆಂಡ್ ಮಾಡಿರುವುದು ಯಾವುದೇ ರೀತಿಯಲ್ಲೂ ಸರಿಯಲ್ಲ. ಆದಿಲ್ ಸಾವಿನ ಪ್ರಕರಣ ಸಂಬಂಧ ತನಿಖೆಮುಗಿದಿಲ್ಲ, ಲಾಕಪ್ ಡೆತ್, ಸಹಜ ಸಾವೋ  ಎಂಬುದು ಇನ್ನೂ ಅಧಿಕೃತವಾಗಿ ದೃಢವಾಗಿಲ್ಲ. ಯಾರನ್ನೋ ಮೆಚ್ಚಿಸಲು ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿರುವುದರಿಂದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ.  ಯಾವ ರೀತಿ ಕೆಲಸ ಮಾಡಬೇಕೆಂಬ ಮನೋಭಾವ ಬರುವುದು ಸಹಜ ಎಂದು ತಿಳಿಸಿದರು.ಅಧಿಕಾರಿಗಳ ಅಮಾನತು ಮಾಡಿರುವುದರಿಂದ ಜನರಲ್ಲಿ ತಪ್ಪು ಮನೋಭಾವನೆ ಮೂಡುವಂತೆ ಆಗಿದೆ. ಇದೊಂದು ಪೂರ್ವನಿಯೋಜಿತ ಕೃತ್ಯ. ಸಾವಿರಾರು ಜನರು ಒಮ್ಮೆಲೆ ಬಂದು ಪೊಲೀಸ್ ಠಾಣೆಗೆ ನುಗ್ಗುವುದು, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುವುದು,  ಠಾಣೆಯೊಳಗೆ ನುಗ್ಗಿ  ಧ್ವಂಸ ಮಾಡುವುದನ್ನು ಖಂಡಿಸುತ್ತೇನೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು. ಸರ್ಕಾರಕ್ಕೆ ಆಗಿರುವ ನಷ್ಟವನ್ನು ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಸರ್ಕಾರಕ್ಕೆ ಭರಿಸಬೇಕು. ಯಾರನ್ನೋ ಮೆಚ್ಚಿಸಲು ಸರಿಯಾದ ಸಾಕ್ಷಾಧಾರಗಳಿಲ್ಲದೇ ನಿರಾಪರಾಧಿಗಳನ್ನು ಬಂಧಿಸಬಾರದು ಎಂದು ಆಗ್ರಹಿಸಿದರು.ಕಳೆದೊಂದು ವರ್ಷದಿಂದ ಚನ್ನಗಿರಿ ತಾಲೂಕಿನಲ್ಲಿ ಐಪಿಲ್ ಜೂಜು, ಮಟ್ಕಾ ದಂಧೆ, ಇಸ್ಪೀಟ್ ಹಳ್ಳಿಹಳ್ಳಿಗಳಲ್ಲಿಯೂ ಅಧಿಕೃತವಾಗಿ ಪರವಾನಗಿ ಪಡೆದವರ ರೀತಿ ಆಡುತ್ತಿದ್ದಾರೆ ಎಂಬುದು ಚನ್ನಗಿರಿ ತಾಲೂಕಿನ ಜನರು ಆಡುತ್ತಿರುವ ಮಾತು. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಇದಕ್ಕೆ ಕಡಿವಾಣ ಹಾಕಬೇಕು. ಯಾವುದೇ ರೀತಿಯ ದಂಧೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಬಿಜೆಪಿ ವತಿಯಿಂದ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಮಾಡಾಳ್ ವಿರೂಪಾಕ್ಷಪ್ಪ ಎಚ್ಚರಿಕೆ ನೀಡಿದರು.ಚನ್ನಗಿರಿ ತಾಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ತಾಲೂಕು ಮಟ್ಟದ ಯಾವುದೇ ಕಚೇರಿಯಲ್ಲಿ ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಇಲ್ಲ. ನೈತಿಕತೆಯೂ ಕುಸಿದಿದೆ. ಭಯದ ವಾತಾವರಣವೂ ಇದೆ. ಇದಕ್ಕೆ ಇತಿಶ್ರೀ ಹಾಡಬೇಕಿದೆ ಎಂದು ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು.