“ಸಿರಿಗೇರಿ ಕ್ಲಸ್ಟರ್‍ನ 3 ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ. ಯುಕೆಜಿ, 1ನೇ ತರಗತಿ ಪ್ರಾರಂಭ”
ಸಿ.ಶಿವರಾಮ, ಸಿರಿಗೇರಿ
ಸಿರಿಗೇರಿ.ಮೆ27. ಈ ಹಿಂದೆ ರಾಷ್ಟ್ರೀಯ ಶಿಕ್ಷಣ (ಎನ್‍ಇಪಿ) ನೀತಿ ಜಾರಿಯಾದಾಗ ಸಿರುಗುಪ್ಪ ತಾಲೂಕಿನಲ್ಲಿ 4 ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತರಗತಿ ಚಾಲನೆಯಲ್ಲಿದ್ದವು. ಈಗ ಇದು ವಿಸ್ತರಣೆಗೊಂಡು 33 ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದ ಎಲ್-ಕೆಜಿ, ಯು-ಕೆಜಿ, 1ನೇ ತರಗತಿ ಪ್ರಾರಂಭಿಸಲು ಆದೇಶವಾಗಿದೆ. ಈಹಿಂದೆ ಕೆಲ ವರ್ಷಗಳಿಂದ ಸಿರಿಗೇರಿಯಲ್ಲಿ ಈ ತರಗತಿಗಳನ್ನು ಆರಂಭಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಕೆಲ ಶಿಕ್ಷಣ ಪ್ರೇಮಿಗಳು, ಸಂಘಟನೆಗಳ ಮುಖಂಡರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಲ್ಲಿ ಒತ್ತಾಯಿಸುತ್ತಾ ಬಂದಿದ್ದರು. ಈ ವಿಷಯವಾಗಿ ಇಲ್ಲಿನ ನ್ಯಾಯವಾದಿ ರಾಂಬಾಬು ಎನ್ನುವವರು ಬೆಂಗಳೂರಿಗೆ ಹೋಗಿ ಶಿಕ್ಷಣ ಇಲಾಖೆಯ ಕಮೀಷ್‍ನರ್‍ರವರನ್ನು ಭೇಟಿಮಾಡಿ ಒತ್ತಾಯಿಸಿದ್ದರು. ಇದರ ಫಲವೆಂಬಂತೆ ಸಿರಿಗೇರಿ ಕ್ಲಸ್ಟರ್‍ನಲ್ಲಿ 03 ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತರಗತಿಗಳಿಗೆ ಚಾಲನೆ ನೀಡಲಾಗುತ್ತಿದೆ.
    ಸಿರಿಗೇರಿಯ ಉನ್ನತೀಕರಿಸಿದ ಸ.ಮಾ.ಹಿ.ಪ್ರಾ (ಬಜಾರ್) ಶಾಲೆ. ದಾಸಾಪುರ ಗ್ರಾಮದ ಸ.ಹಿ.ಪ್ರಾ.ಶಾಲೆ ಮತ್ತು ಕೊಂಚಿಗೇರಿ ಗ್ರಾಮದ ಸ.ಹಿ.ಪ್ರಾ.ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ತರಗತಿ ಪ್ರಾರಂಭಿಸಲು ಆದೇಶ ನೀಡಲಾಗಿದೆ. ಇದಕ್ಕೆ ಬೇಕಾದ ಅನುಕೂಲತೆಗಳ ಸಿದ್ದತೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದ್ದಾರೆ. ಸಿರಿಗೇರಿಯ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದು ಹೈಸ್ಕೂಲ್‍ನಲ್ಲಿನ ಹೆಚ್ಚುವರಿ ಕೊಠಡಿಗಳನ್ನು ನೀಡಬೇಕೆಂದು ಮನವಿ ಮಾಡಲಾಗಿದೆ. ಎಲ್‍ಕೆಜಿ, ಯುಕೆಜೆ, 1ನೇ ತರಗತಿಗಳಲ್ಲಿ ಬೋಧಿಸಲು ಅತಿಥಿ ಶಿಕ್ಷಕರನ್ನು, ಮಕ್ಕಳ ನಿಗಾವಣೆಗೆ ಆಯಾಗಳನ್ನು ನೇಮಿಸಿಕೊಳ್ಳಲಾಗುವುದೆಂಬ ಮಾಹಿತಿ ಇದೆ. ಇದರ ಉಪಯೋಗ ಪಡೆದುಕೊಳ್ಳಲು ಶಿಕ್ಷಣ ಅಧಿಕಾರಿಗಳು ಕರೆ ನೀಡಿದ್ದಾರೆ. ಸ್ಥಳೀಯ ಶಿಕ್ಷಕರು ವೈಯುಕ್ತಿಕ ಆಸಕ್ತಿಯಿಂದ ಬಡಕುಟುಂಬದ ಪೋಷಕರಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಸಿಕೊಳ್ಳಬೇಕಾಗಿದೆ.
ಬಾಕ್ಸ್‍ನಲ್ಲಿ
• ನಮ್ಮ ತಾಲೂಕಿನ 33 ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮದ ಎಲ್‍ಕೆಜಿ, ಯುಕೆಜಿ, 1ನೇ ತರಗತಿಗಳನ್ನು ತಲಾ 30 ವಿದ್ಯಾರ್ಥಿಗಳಂತೆ ಪ್ರವೇಶ ಮಾಡಿಕೊಳ್ಳಲಾಗುವುದು. ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಂತೆ ಇದಕ್ಕೆ ಅಗತ್ಯವಿರುವ ಸಿದ್ದತೆಗಳನ್ನು ಮಾಡಿಕೊಂಡು ಚಾಲನೆ ನೀಡಲಾಗುವುದು. ಆರಂಭದಲ್ಲಿ ವ್ಯತ್ಯಾಸಗಳಾದರೂ ಹಂತಹಂತವಾಗಿ ಸರ್ಕಾರದ ಅನುದಾನಗಳ ಮೂಲಕ ಅಭಿವೃದ್ಧಿಪಡಿಸಲಾಗುವುದು. ಎಸ್.ಯೋಗಾನಂದಯ್ಯ. ತಾಲೂಕು ಶಿಕ್ಷಣ ಸಂಯೋಜಕ ಅಧಿಕಾರಿ ಸಿರುಗುಪ್ಪ
• ಖಾಸಗೀ ಶಾಲೆಗಳಲ್ಲಿ ದುಬಾರಿ ಶುಲ್ಕ ಕಟ್ಟಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಕಷ್ಟವಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಬಡ ಕುಟುಂಬಗಳ ಮಕ್ಕಳಿಗೆ ಅನುಕೂಲವಾಗಲಿದೆ. ಇದನ್ನು ಅಚ್ಚುಕಟ್ಟಾಗಿ ನಡೆಸುವ ಮೂಲಕ ಗುಣಮಟ್ಟದ ಶಿಕ್ಷಣ ಬಡ ಮಕ್ಕಳಿಗೆ ದೊರೆಯುವಂತೆ ಮಾಡಬೇಕು:- ಮಕ್ಕಳ ಪೋಷಕರು ಸಿರಿಗೇರಿ.
• ಈಗಾಗಲೇ ಬಿಇಓ ಸರ್ ಮತ್ತು ಶಿಕ್ಷಣ ಸಂಪನ್ಮೂಲ ಅಧಿಕಾರಿಗಳು ಇಂಗ್ಲೀಷ್ ತರಗತಿಗಳ ಆರಂಭಕ್ಕೆ ತಯಾರಿಗಳ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾರ್ಗದರ್ಶನವನ್ನು ಮಾಡಿದ್ದಾರೆ. ಗ್ರಾಮದಲ್ಲಿ ಪೋಷಕರಿಗೆ ಈ ಕುರಿತು ಮಾಹಿತಿ ನೀಡಲಾಗುತ್ತಿದೆ:- ಎಚ್.ದುರುಗಪ್ಪ, ಮುಖ್ಯಗುರುಗಳು ಸ.ಹಿ.ಪ್ರಾ.ಶಾಲೆ ಕೊಂಚಿಗೇರಿ.
ಪೋಟೋ:- ಕೊಂಚಿಗೇರಿ ಸ.ಹಿ.ಪ್ರಾ.ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆ ಪ್ರಾರಂಭಕ್ಕೆ ಸಿದ್ದತೆ ನಡೆದಿದೆ.