ತಾಲೂಕಿನಲ್ಲಿ ಮಳೆಯಿಂದ ಗರಿಗೆದರಿದ ಕೃಷಿ ಚಟುವಟಿಕೆಗಳು
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಮೇ.27: ತಾಲೂಕಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಒಳ್ಳೆ ಮಳೆಯಾಗುವ ನಿರೀಕ್ಷೆಗಳು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕಳೆದ ವಾರದಿಂದ  ತಾಲೂಕಿನಾದ್ಯಂತ ಮಳೆ ಸುರಿಯಲು ಆರಂಭಿಸಿದ್ದರಿಂದ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ರೈತರು ಜಮೀನುಗಳಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ತಾಲೂಕಿನಲ್ಲಿ ಜನವರಿಯಿಂದ ಮೇ ತಿಂಗಳ ವರೆಗೆ 73.8ಎಂ.ಎಂ.ಮಳೆ ಬರಬೇಕಿತ್ತು. ಆದರೆ ಕೇವಲ 13 ಮಿ.ಮೀಟರ್ ಮಳೆಯಾಗಿದ್ದರಿಂದ ರೈತರು ಯಾವುದೇ ಬೆಳೆಯನ್ನು ಬೆಳೆಯಲು ಸಾಧ್ಯವಾಗಿಲ್ಲ, ಮುಂಗಾರು ಮಳೆ ಪ್ರವೇಶವಾಗಿದ್ದು, ಕೃಷಿ ಇಲಾಖೆ ರೈತರಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ ಮುಂತಾದ ಕೃಷಿ ಪರಿಕರಗಳ ಸರಬರಾಜಿಗೆ ಮುಂದಾಗಿದ್ದು, ಈಗಾಗಲೆ ದಾಸ್ತಾನು ಮಾಡಿಕೊಂಡಿದೆ.
ತಾಲೂಕಿನಲ್ಲಿ ಒಟ್ಟು 1.04ಲಕ್ಷ ಹೆಕ್ಟೆರ್ ಭೂಮಿ ಇದ್ದು, ಇದರಲ್ಲಿ 80ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಮಳೆಯಾಶ್ರಿತ 35ಸಾವಿರ ಹೆಕ್ಟೆರ್, ನೀರಾವರಿ ನದಿ, ಕಾಲುವೆ, ಹಳ್ಳ, ಬೋರ್‌ವೆಲ್‌ಗಳ ಮೂಲಕ ಸುಮಾರು 45ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ವಿವಿಧ ಬೆಳೆಯನ್ನು ಬೆಳೆಯಲಾಗುತ್ತದೆ.  ಪ್ರಮುಖ ಬೆಳೆಯಾಗಿ ರೈತರು ಭತ್ತವನ್ನೇ ಬೆಳೆಯುತ್ತಿದ್ದು, ಉಳಿದಂತೆ ಹತ್ತಿ, ಮೆಣಸಿನಕಾಯಿ, ಜೋಳ, ಸಜ್ಜೆ, ನವಣೆ ಬೆಳೆಯನ್ನು ಬೆಳೆಯುತ್ತಿದ್ದಾರೆ.
ನೆರೆಯ ಸೀಮಾಂಧ್ರ ಪ್ರದೇಶದಿಂದ ಕಳೆಪೆ ಗುಣಮಟ್ಟದ ಬೀಜಗಳು ತಾಲೂಕಿನಲ್ಲಿ ಮಾರಾಟವಾಗುತ್ತಿರುವ ಬಗ್ಗೆ ರೈತರಿಂದ ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಈಗಾಗಲೆ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಆದರೂ ರೈತರಿಗೆ ಕಳಪೆ ಗುಣಮಟ್ಟದ ಬೀಜಗಳನ್ನು ಖರೀದಿಸದಂತೆ ಮತ್ತು ಖರೀದಿಸಿದ ಬೀಜಕ್ಕೆ ಸಂಬಂಧಿಸಿದಂತೆ ರಸೀದಿಯನ್ನು ಪಡೆಯುವಂತೆ ಜಾಗೃತಿ ಮೂಡಿಸಲು ಕೃಷಿ ಸಂಜೀವಿನಿ ವಾಹನದ ಮೂಲಕ ಮತ್ತು ರೈತ ಸಂಪರ್ಕ ಕೇಂದ್ರಗಳ ಮೂಲಕ ಕಳಪೆ ಗುಣಮಟ್ಟದ ಬೀಜಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
 ರಸಗೊಬ್ಬರ, ಬೀಜ, ಕೀಟನಾಶಕ ಹಾಗೂ ಕೃಷಿ ಪರಿಕರಗಳ ಮಾರಾಟಗಾರರ ಸಭೆಯನ್ನು ಕರೆಯಲಾಗಿದ್ದು, ರೈತರಿಗೆ ಎಂ.ಆರ್.ಪಿ ಧರಕ್ಕಿಂತ ಹೆಚ್ಚಿನ ಧರಕ್ಕೆ ಮಾರಾಟಮಾಡಬಾರದು ಮತ್ತು ರೈತರು ಖರೀದಿಸಿದ ಪ್ರತಿಯೊಂದು ವಸ್ತುವಿಗೂ ತಪ್ಪದೆ ರಸೀದಿಯನ್ನು ಕೊಡಬೇಕೆಂದು ತಿಳಿಸಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಎಮ್.ತಿರುಮಲೇಶ ತಿಳಿಸಿದ್ದಾರೆ.
ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಮಳೆಯಾಗುವ ಬಗ್ಗೆ ತಜ್ಞರು ತಿಳಿಸಿದ್ದು, ರೈತರಿಗೆ ಬೇಕಾದ ಬೀಜ ಮತ್ತು ರಸಗೊಬ್ಬರ ತಾಲೂಕಿನಲ್ಲಿ ಕೊರತೆಯಾಗುವುದಿಲ್ಲ. ಪ್ರಸ್ತುತ ರಸಗೊಬ್ಬರ ದಾಸ್ತಾನು ಇದ್ದು, ಬಿತ್ತನೆ ಬೀಜ ಎರಡು ಮೂರು ದಿನಗಳಲ್ಲಿ ಬರುವ ನಿರೀಕ್ಷೆ ಇದೆ. ಈಗಾಗಲೆ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಿಂದ ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟಗಾರರ ಸಭೆಯನ್ನು ಕರೆದು ರೈತರಿಗೆ ತೊಂದರೆಯಾಗದಂತೆ ಕೆಲವು ಸಲಹೆಗಳನ್ನು ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ತಿಳಿಸಿದ್ದಾರೆ.