ಎಐಡಿಎಸ್ಓನಿಂದ ಸಂಗೀತ ಸಂಜೆ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.27: ಎಐಡಿಎಸ್ಓ ಯುವಜನ ಸಂಘಟನೆಯು ಸಂಘಟಿಸಿದ ರಾಜ್ಯ ಮಟ್ಟದ ಸಂಗೀತ ಕಾರ್ಯಾಗಾರ ವು ಎರಡು ದಿನಗಳ ಕಾಲ ನಗರದ ಗಾಂಧಿಭವನದಲ್ಲಿ ನಡೆಯಿತು. ಕಾರ್ಯಾಗಾರದ ಕೊನೆಯ ದಿನ ಭಾನುವಾರದಂದು ಸಂಜೆ  ನಗರದ ರಾಜ್ ಕುಮಾರ್ ಪಾರ್ಕ್ ನಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಜೆ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ  ಮುಖ್ಯವಾಗಿ ಇಂದಿನ ಸಾಮಾಜಿಕ ವಾತಾವರಣವು ಹದಕೆಡುತ್ತಿದೆ. 
ಇಂದು ಸಮಾಜದಲ್ಲಿ ಸದಾಭಿರುಚಿಯ ಹಾಡುಗಳು, ಸಿನಿಮಾ, ಸಂಗೀತ, ಸಾಹಿತ್ಯ, ನಾಟಕಗಳು ಕಣ್ಮಾರೆಯಾಗುತ್ತಿವೆ. ಸೂಕ್ಷ್ಮ ಸಂವೇದನೆಗಳು ಸತ್ತು ಹೋಗುತ್ತಿವೆ. ಸಾಮಾಜಿಕ ಬದಲಾವಣೆಗಳಲ್ಲಿ ನಂಬಿಕೆ ಇಟ್ಟಿರುವ ಕ್ರಾಂತಿಕಾರಕ ಯುವಜನ ಸಂಘಟನೆಯಾದ ಎಐಡಿಎಸ್ಓ ಯು ಮಾನವೀಯ ಮೌಲ್ಯಗಳು, ಉನ್ನತ ಸಂಸ್ಕೃತಿಯ ವಿಚಾರಗಳನ್ನು ಜನರ ಬಳಿಗೆ ಕೊಂಡ್ಯೋಯುವ ನಿಟ್ಟಿನಲ್ಲಿ ನಮ್ಮ ಸಂಘಟನೆಯು ಮುಂದಾಗುತ್ತಿದೆ. ಯುವಕರನ್ನು ಸಂಘಟಿಸುವ ಮೂಲಕ ಅವರಲ್ಲಿ ಸಾಮಾಜಿಕ ಪ್ರಜ್ಞೆ,  ಸಾಮಾಜಿಕ ಕಳಕಳಿ  ಮೂಡಿಸುವ ನಿಟ್ಟಿನಲ್ಲಿ ಇಂತಹ ಸಂಗೀತ, ಕಲೆ, ಸಾಹಿತ್ಯ,ನಾಟಕ ಕಾರ್ಯಾಗಾರಗಳನ್ನು ಸಂಘಟಿಸುತ್ತಾ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ ಕ್ರೀಡಾಕೂಟ, ಸದಾಭಿರುಚಿಯ ಸಿನಿಮಾ ಪ್ರದರ್ಶನಗಳನ್ನು ಆಯೋಜಿಸುತ್ತಿದೆ.  ಎಂದು ಎಐಡಿಎಸ್ಓ ಯುವಜನ ಸಂಘಟನೆಯ ರಾಜ್ಯಾಧ್ಯಕ್ಷರಾದ ಶರಣಪ್ಪ ಉದ್ಧಾಳ್ ಅವರು ಹೇಳಿದರು. 
ಎರಡು ದಿನದ ಕಾರ್ಯಾಗಾರದಲ್ಲಿ ಸಂಗೀತ ಕಲಿಸಲು ಸಂಪನ್ಮೂಲ ವ್ಯಕ್ತಿಗಳಾಗಿ ಬಂದ ಕಲಾವಿದರು ಹಾಗೂ ರಾಜ್ಯ ಜಾನಪದ ಪರಿಷತ್ ನ ಸದಸ್ಯರಾದ ಕೆ. ಕೆ. ದೇವಾನಂದ್ ವರಪ್ರಸಾದ್ ಅವರು ಮಾತನಾಡುತ್ತಾ ,ಇಂದಿನ ಆಧುನೀಕರಣ, ಜಾಗತೀಕರಣ, ಮಾರುಕಟ್ಟೆ  ಸಂಸ್ಕೃತಿಯು ನಾಗರಿಕ ಸಮಾಜವನ್ನು ಕೇಡಿಸುತ್ತಿದೆ, ಇಂದು  ಸಮಾಜದ ಭಾಗವಾದ ಸಂಗೀತ, ಸಾಹಿತ್ಯ, ನಾಟಕ, ಕಲೆ, ಸಿನಿಮಾಗಳು ಇಂದಿನ ಸಾಮಾಜಿಕ ವಾತಾವರಣವನ್ನು ಕಲುಷಿತಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಬದಲಾವಣೆಯಲ್ಲಿ ತೊಡಗಿರುವ ಪ್ರಜ್ಞಾವಂತ ಯುವಜನರು ಸಂಗೀತ, ಸಾಹಿತ್ಯ, ನಾಟಕಗಳ ಮೂಲಕ ಸಂಗೀತವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವುದು ಇಂದಿನ ಅವಶ್ಯಕತೆಯಾಗಿದೆ . ಸಂಗೀತ ಕಾರ್ಯಾಗಾರಗಳು ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು   ಹೇಳಿದರು.
ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಎರಡು ದಿನಗಳ ಕಾಲ ಸಂಗೀತ ಕಲಿತ ಶಿಬಿರಾರ್ಥಿಗಳು ಪ್ರಗತಿಪರ, ಸಾಮಾಜಿಕ, ರೈತ, ಕಾರ್ಮಿಕ, ಯುವಜನರು ಹಾಗೂ ದುಡಿಯುವ ಜನರ ಬಗೆಗಿನ  ಹೋರಾಟದ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ಎಐಡಿಎಸ್ಓ ಯುವಜನ ಸಂಘಟನೆಯ ರಾಜ್ಯ ಕಾರ್ಯದರ್ಶಿಗಳಾದ ಸಿದ್ದಲಿಂಗ ಬಾಗೇವಾಡಿ,ಹಾಗೂ  ರಾಜ್ಯ ಸಮಿತಿಯ ಸೆಕ್ರೆಟರಿ ಸದಸ್ಯರು ಮತ್ತು ಬಳ್ಳಾರಿ ಜಿಲ್ಲಾ ಕಾರ್ಯದರ್ಶಿಗಳಾದ ಜಗದೀಶ್ ನೆಮಕಲ್ಲು, ಪಂಪಾಪತಿ ಕೋಳೂರು, ಜಿಲ್ಲಾ ಅಧ್ಯಕ್ಷರು, ಸದಸ್ಯರಾದ ಎರ್ರಿಸ್ವಾಮಿ ಮುಂಡ್ರಿಗಿ, ಪಾಲಾಕ್ಷ ಹಡಗಲಿ, ಪ್ರಕಾಶ್ ನಾಯಕ್, ಸಿದ್ದು, ಆಜಯ್, ತಿರುಮಲ, ಲಿಂಗರಾಜ್, ಹಾಗೂ ಬಳ್ಳಾರಿ ನಗರದ ಸಾಹಿತ್ಯ, ಸಂಗೀತ ಆಸಕ್ತರು, ರಾಜ್ ಕುಮಾರ್ ಪಾರ್ಕ್ ನಲ್ಲಿ ವಿಹಾರಕ್ಕೆ ಬಂದ ಸಾರ್ವಜನಿಕರು ಸಂಗೀತ ಸಂಜೆಯಲ್ಲಿ ಭಾಗವಹಿಸಿದ್ದರು.