ವೀರಶೈವ- ಲಿಂಗಾಯತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೭: ವೀರಶೈವ- ಲಿಂಗಾಯತ ಸಮುದಾಯದ ಪ್ರತಿಭಾವಂತ ಮಕ್ಕಳಿಗೆ ಪ್ರದಾನ ಮಾಡುತ್ತಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮುಂದುವರಿಸಲು ಮಹಾಸಭಾ ತೀರ್ಮಾನಿಸಿದೆ ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ , ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು. ಬಿಐಇಟಿ ಕಾಲೇಜಿನ ಎಸ್ಸೆಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ  ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ವರ್ಷ ಪ್ರತಿಭಾ ಪುರಸ್ಕಾರಕ್ಕೆಂದೇ ೧ ಕೋಟಿ ರೂಪಾಯಿ. ಖರ್ಚಾಗುತ್ತಿದ್ದು, ಸಮಾಜದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡುವ ಕಾರ್ಯವನ್ನು ಮುಂದುವರಿಸಲು ಮಹಾಸಭಾ ನಿರ್ಧರಿಸಿದೆ ಎಂದರು.ಪ್ರತಿಭಾ ಪುರಸ್ಕಾರಕ್ಕೆ ಪ್ರತಿ ವರ್ಷ ೧ ಕೋಟಿ ರೂಪಾಯಿ ಬೇಕಾಗುತ್ತದೆ. ಪ್ರತಿಭಾ ಪುರಸ್ಕಾರ ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಮಹಾಸಭಾದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ, ಮುಂದುವರಿಸುವ ತೀರ್ಮಾನಕ್ಕೆ ಬರಲಾಗಿದೆ. ಪ್ರತಿಭಾ ಪುರಸ್ಕಾರದ ಮೊತ್ತ ಕಡಿಮೆಯಾದರೂ ಪುರಸ್ಕೃತರು ಮಹಾಸಭಾದ ಪುರಸ್ಕಾರ ವನ್ನೇ ಪ್ರೋತ್ಸಾಹ ಎಂದು ತಿಳಿದುಕೊಂಡು  ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು ಎಂದು ತಿಳಿಸಿದರು.ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿ, ಯುವ ಜನರು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪ್ರತಿಭಾ ಪುರಸ್ಕಾರ ಪಡೆದವಲ್ಲರೂ ಉನ್ನತ ಧ್ಯೇಯ, ಗುರಿ, ಸಾಧನೆಯ ಮೂಲಕ ಹೆತ್ತವರಿಗೆ, ವಿದ್ಯೆ ಕಲಿಸಿದ ಗುರುಗಳು, ಸಮಾಜಕ್ಕೆ ಕೀರ್ತಿ ತರುವಂತಹವರಾಗಬೇಕು ಎಂದು ಹಾರೈಸಿದರು.ವೀರಶೈವ ಮಹಾಸಭಾದಿಂದ ಬಸವ ಜಯಂತಿಯನ್ನು ಆಚರಿಸುವ ಜೊತೆಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಸತ್ಸಂಪ್ರದಾಯ. ಬಸವಣ್ಣನವರು ೧೨ನೇ ಶತಮಾನದಲ್ಲೇ ಪ್ರಜಾಪ್ರಭುತ್ವದ ಪರಿಕಲ್ಪನೆಯ ಬೀಜ ಬಿತ್ತಿದವರು. ಬಸವಣ್ಣ  ಕಾರ್ಯ ಮಾಡಿ ಸಾಽಸಿ ತೋರಿದವರು. ಮಹಿಳೆಯರಿಗೂ ಸಮಾನ ಸ್ಥಾನಮಾನದ ಮೂಲಕ ಆಗಲೇ ಬದಲಾವಣೆಗೆ ಮುನ್ನುಡಿ ಬರೆದವರು. ಬಸವಣ್ಣನವನರು ಹಾಕಿಕೊಟ್ಟ ಹಾದಿಯಲ್ಲೇ ಪ್ರಜಾಪ್ರಭುತ್ವ ರಚನೆಯಾಗಿದೆ ಎಂದು ತಿಳಿಸಿದರು.ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಸ್.ಎಸ್.ಪಾಟೀಲ್, ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಎಸ್.ಎಸ್.ಗಣೇಶ, ಅಣಬೇರು ರಾಜಣ್ಣ ಇತರರು ಇದ್ದರು.ಬಸವ ತತ್ವಃಅನುಷ್ಟಾನದ ದಾರಿಗಳು.. ವಿಷಯವಾಗಿ ಶಹಾಪುರದ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿದರು. ಯುಪಿಎಸ್ಸಿ ಸಿಎಸ್‌ಇ-೨೦೨೩ರ ಸಾಧಕಿ ಸೌಭಾಗ್ಯ ಎಸ್.ಬೀಳಗಿಮಠ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಬಾಗಲಕೋಟೆಯ ಮೆಳ್ಳಿಗೆರೆಯ ವಿದ್ಯಾರ್ಥಿನಿ ಅಂಕಿತ ಬಸಪ್ಪ, ಜಿಲ್ಲೆಗೆ ಮೊದಲ ಸ್ಥಾನ ಪಡೆದ ಶಾಬನೂರು ಗ್ರಾಮದ ಎಚ್.ಜಿ. ಗಾನವಿ ಅವರನ್ನು ಅಭಿನಂದಿಸಲಾಯಿತು.ಅಲ್ಲದೇ, ೨೦೨೧-೨೨, ೨೦೨೨-೨೩ನೇ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಪ್ರೋತ್ಸಾಹಿಸಲಾಯಿತು.