ಸೇವೆಗಿಂತಲೂ ದೊಡ್ಡ ಆಧ್ಯಾತ್ಮಿಕ ಜೀವನ ಇನ್ನೊಂದಿಲ್ಲ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೭; ಪ್ರತಿಯೊಬ್ಬರು ಮೌಲ್ಯಯುತ ಬದುಕನ್ನ ಸಾಗಿಸಬೇಕು ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ನಗರದ ರೋಟರಿ ಬಾಲಭವನದಲ್ಲಿ ಜಿಲ್ಲಾ ವಚನ, ಚುಟುಕು ಸಾಹಿತ್ಯ ಪರಿಷತ್ತು, ಸೂರ್ತಿ ಪ್ರಕಾಶನ ಸಂಯುಕ್ತಾ ಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ, ವಿಶ್ವಗುರು ಬಸವಶ್ರೀ, ರಕ್ಷಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ, ಕವಿಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪುಸ್ತಕಗಳನ್ನು ಓದಿ ಸಾರಾಂಶ, ಕವಿ ಆಶಯ, ಭಾವನೆಗಳು ಸಮಾಜದಲ್ಲಿ ಅನುಷ್ಠಾನಕ್ಕೆ ಬರುವಂತಾಗಬೇಕು ಎಂದರು.ಮನಸ್ಸಿಗೆ ಬಂದಂತೆ, ತೋಚಿದಂತೆ ಹೆಂಗೆಗೋ ಬದುಕುವುದಲ್ಲ. ಬದುಕಿಗೆ ಒಂದು ಅರ್ಥ, ವ್ಯವಸ್ಥೆ, ತತ್ವ ಬದ್ಧ, ಆಚಾರ, ವಿಚಾರ ಇರಬೇಕು. ಅವುಗಳ ಮೂಲಕ ಸಾಧನೆ ಮಾಡಬೇಕು. ಎಲ್ಲರೂ ಬಸವಣ್ಣ ಆಗಲು ಸಾಧ್ಯವಿಲ್ಲ. ಆದರೆ, ಅವರ ಮೌಲ್ಯ ಚಿಂತನೆಯನ್ನು ಜೀವನದಲ್ಲಿ ಪಾಲಿಸುವಂತಾಗಬೇಕು ಎಂದು ತಿಳಿಸಿದರು.ಮಹಾನ್ ಸಾಧಕರ ವಿಚಾರಮೌಲ್ಯಗಳನ್ನ ಕೇಳಿ, ಪಾಲಿಸುವ ಮೂಲಕ ಬದುಕನ್ನು ಸುಂದರಗೊಳಿಸಬೇಕು. ತತ್ವ ಬದ್ಧ, ಒಳ್ಳೆಯ ಆಚಾರ, ವಿಚಾರ ಅಳವಡಿಸಿಕೊಂಡಲ್ಲಿ ಆರೋಗ್ಯವೂ ಚೆನ್ನಾಗಿ ಇರುತ್ತದೆ. ಆಚಾರ, ವಿಚಾರಗಳ ಚಾಚೂ ತಪ್ಪದೆ ಪಾಲಿಸಿದಾಗ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ತೆ ಬರುತ್ತದೆ. ಲೌಕಿಕ ಬದುಕಿನಲ್ಲಿ ಬಹಳಷ್ಟು ಹಣದ ಗೀಳು ಹಚ್ಚಿಕೊಂಡರೆ ಸಾಧನೆ ಸಾಧ್ಯವಿಲ್ಲ. ಹಣ ಇಲ್ಲದೆ ಜೀವನ ನಡೆಸಲು ಆಗುವುದಿಲ್ಲ. ಲೌಕಿಕ, ಆಧ್ಯಾತ್ಮಿಕತೆಯೆಡೆಗೆ ಸಮಾನ ಆದ್ಯತೆ ನೀಡಬೇಕು. ಸೇವೆಗಿಂತಲೂ ದೊಡ್ಡ ಆಧ್ಯಾತ್ಮಿಕ ಜೀವನ ಇನ್ನೊಂದು ಇಲ್ಲ. ಸಾಹಿತ್ಯ, ಕೃಷಿಯಲ್ಲಿ ತೊಡಗಿಸಿಕೊಂಡು ಸೇವೆ ಮಾಡುವಂತದ್ದು ಸಹ ನಿಜವಾದ ಆಧ್ಯಾತ್ಮಿಕ ಬದುಕು ಎಂದು ತಿಳಿಸಿದರು.ಈಗ ಅಭಿವೃದ್ಧಿಯ ಹೆಸರಲ್ಲಿ ಅನೇಕ ದೇಶಗಳು ವಾಮಮಾರ್ಗ ದಲ್ಲಿ ಸಾಗುತ್ತಿವೆ.ಅಭಿವೃದ್ಧಿ ಆಗುವುದು ತಪ್ಪಲ್ಲ. ಆದರೆ, ಅದಕ್ಕಾಗಿ ಅನುಸರಿಸುವ ಮಾರ್ಗ ಮುಖ್ಯ. ಸೈನಿಕರ ಬದುಕು ಸಂತ ಬದುಕು. ಸೈನಿಕರ ಬಗ್ಗೆ ಅಲಕ್ಷ್ಯ ಸಲ್ಲದು. ಅನ್ನ ನೀಡುವ ಅನ್ನದಾತರು, ದೇಶ ಕಾಯುವಂತಹ ಸೈನಿಕರು ಎರಡು ಕಣ್ಣುಗಳು. ಅವರನ್ನು ಸದಾ ಗೌರವಿಸಬೇಕು ಎಂದು ತಿಳಿಸಿದರು.ನಿವೃತ್ತ ಶಿಕ್ಷಕಿ, ಸಾಹಿತಿ ನೀಲಗುಂದ ಜಯಮ್ಮ ಮಾತನಾಡಿ, ಬಸವಣ್ಣ ಎಂದರೆ ಮಹಾನ್ ದಾರ್ಶನಿಕ. ಅವರ ಹಾದಿಯಲ್ಲಿ ಸಾಗುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳೊಣ ಎಂದು ಆಶಿಸಿದರು.ಹೊನ್ನಾಳಿಯ ಹಿರಿಯ ಸಾಹಿತಿ ಯು.ಎ. ಸಂಗಮನಾಳ ಮಠ್ ಮಾತನಾಡಿ, ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಗೌರವಿಸಿದೆ. ಅದರ ನೆನಪಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಎಚ್. ರಾಜಶೇಖರ ಗುಂಡಗಟ್ಟಿ ಅವರು ಪ್ರತಿ ವರ್ಷ ಬಸವ ಜಯಂತಿಯಂದು ತಮ್ಮ ತಂದೆ ತಾಯಿ ಅವರ ಹೆಸರಿನಲ್ಲಿ ಐದು ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯ ವಿಶ್ವಗುರು ಬಸವಶ್ರೀ ಪ್ರಶಸ್ತಿ ನೀಡಲು ಮುಂದಾಗಿ ರುವುದು ಸಂತೋಷದ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು. ಹರಪನಹಳ್ಳಿಯ ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಪೂಜಾರ್, ಶರಣರ ದೃಷ್ಟಿಯಲ್ಲಿ ಬಸವಣ್ಣ. ವಿಷಯ ಕುರಿತು ಉಪನ್ಯಾಸ ನೀಡಿದರು. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಎಚ್. ರಾಜಶೇಖರ ಗುಂಡ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೂರ್ತಿ ಪ್ರಕಾಶ ನದ ಅಧ್ಯಕ್ಷ ಎಂ. ಬಸವರಾಜ್, ಕೆ.ಎಸ್. ವೀರಭದ್ರಪ್ಪ ತೆಲಗಿ ಇತರರು ಇದ್ದರು.ಕನ್ನಡ ಪಂಡಿತ ಎಸ್. ಎಂ. ರುದ್ರಮುನಿ ಅಯ್ಯನವರಿಗೆ ವಿಶ್ವಗುರು ಬಸವಶ್ರೀ, ನಿವೃತ್ತ ಯೋಧರಾದ ಎಂ.ಎಸ್. ರಾಮಚಂದ್ರಪ್ಪ, ಮಾಲನಗೌಡ ಪಾಟೀಲ್ ಅವರಿಗೆ ರಕ್ಷಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.ಉಮಾದೇವಿ ಎಂ. ಹಿರೇಮಠ ಪ್ರಾರ್ಥಿಸಿದರು. ಓಂಕಾರಯ್ಯ ಎಸ್. ತವನಿಽ ಸ್ವಾಗತಿಸಿದರು. ಸುನಿತಾ ಪ್ರಕಾಶ್ ನಿರೂಪಿಸಿದರು. ಜಿ.ಎಂ.ಜಿ. ವೀರೇಶ್ ವಂದಿಸಿದರು.