ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ರದ ಮತ ಹಾಕಲು ಮನವಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.27: ಜೂನ್ 3ರಂದು ವಿಧಾನ ಪರಿಷತ್ 3 ಪದವೀಧರ ಕ್ಷೇತ್ರ ಹಾಗೂ 3 ಶಿಕ್ಷಕರ ಕ್ಷೇತ್ರದ ಒಟ್ಟು ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ರದ ಮತ ನೀಡಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಶಿಕ್ಷಕರ ಘಟಕದ ರಾಜಾಧ್ಯಕ್ಷ ಬಸವರಾಜ್ ಗುರಿಕಾರ ಮನವಿ ಮಾಡಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪದವೀಧರ ಮತದಾರರು ಶಿಕ್ಷಕರು ಸರಕಾರದ ಉತ್ತಮ ಸಾಧನೆ ಒಳ್ಳೆಯ ಆಡಳಿತವನ್ನು ನೀಡಿದ್ದನ್ನು ಪರಿಗಣಿಸಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ತಿನ 6 ಸ್ಥಾನಗಳನ್ನು ಗೆಲ್ಲುವ ಸಂಪೂರ್ಣ ವಿಶ್ವಾಸ ನಮ್ಮದಾಗಿದೆ. ನಮ್ಮ 5 ಗ್ಯಾರಂಟಿಗಳಲ್ಲಿ ಪದವೀಧರರ ಯೋಜನೆಯಾದ ಯುವ ನಿಧಿಯು ಒಂದಾಗಿದ್ದು ಪದವೀದರರಿಗೆ ಆಶಾಕಿರಣವಾಗಿದೆ ಎಂದು ತಿಳಿಸಿದರು.ಸರಕಾರಿ ಶಾಲೆಗಳಿಗೆ 11494 ಶಿಕ್ಷಕರ ನೇಮಕ 35 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. 2162 ಸರಕಾರಿ ಶಾಲೆಗಳ 7342 ಕೊಠಡಿಗಳ ದುರಸ್ತಿಗೆ 70 ಕೋಟಿ ಅನುದಾನ ನೀಡಲಾಗಿದೆ. 58 ಲಕ್ಷ ವಿದ್ಯಾರ್ಥಿಗಳಿಗೆ 280 ಕೋಟಿ ಕೋಟಿ ವೆಚ್ಚದಲ್ಲಿ ಪೌಷ್ಟಿಕ ಆಹಾರ ವಿತರಣೆ ಮಾಡಲಾಗಿದೆ. ಸರಕಾರಿ ಶಾಲೆಯ 45 ಲಕ್ಷ ಮಕ್ಕಳಿಗೆ 143 ಕೋಟಿ ವೆಚ್ಚದಲ್ಲಿ ಎರಡು ಜೊತೆ ಸಮವಸ್ತ್ರ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಅತ್ಯುತ್ತಮ ಸಾಧನೆ ಮಾಡಿದ ವಿಶ್ವವಿದ್ಯಾಲಯಗಳಿಗೆ ತಲಾ 50 ಲಕ್ಷದಂತೆ ಒಟ್ಟು 350 ಕೋಟಿ ಅನುದಾನ ನೀಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಕನಿಷ್ಟ 5 ಸಾವಿರ, ಗರಿಷ್ಠ 8 ಸಾವಿರ ರೂಪಾಯಿ ವೇತನ ಹೆಚ್ಚಳ ಮಾಡಲಾಗಿದೆ. ಅತಿಥಿ ಉಪನ್ಯಾಸಕರುಗಳಿಗೆ ರಜೆಯ ಸೌಲಭ್ಯ ನೀಡಲಾಗಿದೆ. 5 ಲಕ್ಷ ರೂಪಾಯಿ ವೈದ್ಯಕೀಯ ಸೌಲಭ್ಯ, 60 ವರ್ಷದ ನಂತರ ನಿವೃತ್ತಿಯಾಗುವ ಸಂದರ್ಭದಲ್ಲಿ ಬರಿಗೈಯಿಂದ ಕಳುಹಿಸದೇ 5 ಲಕ್ಷ ರೂಪಾಯಿ ಇಡಿ ಗಂಟು ನೀಡಲಾಗುವುದು ಎಂದು ತಿಳಿಸಿದರು.19 ಸಾವಿರ ಎನ್.ಪಿ.ಎಸ್. ಯೋಜನೆಯಲ್ಲಿದ್ದ ನೌಕರರನ್ನು ಓಪಿಎಸ್  ವ್ಯಾಪ್ತಿಗೆ ಒಳಪಡಿಸಲಾಗಿದೆ. ಶಿಕ್ಷಕರ ಕೋರಿಕೆಯ ಮೇರೆಗೆ 29 ಸಾವಿರ ಶಿಕ್ಷಕರಿಗೆ ಅವರು ಬಯಸಿದ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ತುಟ್ಟಿಭತ್ಯೆ ನೀಡಿದ ಕ್ಷಣಾರ್ಧದಲ್ಲಿ ರಾಜ್ಯದ ಸರಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದೆ. ಎನ್.ಪಿ.ಎಸ್. ಬದಲು ಎಸ್.ಇ.ಪಿ. ಜಾರಿಗೆ ತರಲು ಸಮಿತಿ ರಚಿಸಲಾಗಿದೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ  ತಿಮ್ಮಯ್ಯ ಪುರ್ಲೆ, ಎಂ.ಆರ್.ಮಾರ್ತಾಂಡಪ್ಪ, ಲಕ್ಷ್ಮಣ್, ಅನುಪಮ, ವೀರೇಶ್, ಆರ್.ಎಸ್.ಪಾಟೀಲ್, ಜಿ.ಬಿ.ಹಾವೇರಿ ಇತರರು ಇದ್ದರು.