ಎಸ್.ಪಿ ರಾಜಶೇಖರ ಅವರಿಗೆ ಎಮ್.ಎಲ್.ಸಿ ಮಾಡಿ
ಸಂಜೆವಾಣಿ ವಾರ್ತೆ
ಬೀದರ್: ಮೇ.27:ಕಾಂಗ್ರೆಸ್ ನ ಹಿರಿಯ ಮುಖಂಡರಾದ ಎಸ್.ಪಿ ರಾಜಶೇಖರ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವಂತೆ ಹೈದ್ರಾಬಾದ್ ಕರ್ನಾಟಕ ಕ್ರಿಷ್ಚನ್ ಡೆವಲಪಮೆಂಟ್ ಅಸೋಸಿಯೇಷನ್ ವಕ್ತಾರ ಈ.ಕುಮಾರ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಎಸ್.ಪಿ ರಾಜಶೇಖರ ಅವರು ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿರುವರು. ಅವರ ಹಿರಿತನ ಹಾಗೂ ಅನುಭವ ಪರಿಗಣಿಸಿ ಅವರಿಗೆ ಎಮ್.ಎಲ್.ಸಿ ಮಾಡುವ ಮೂಲಕ ಈ ಭಾಗಕ್ಕೆ ಮಾನ್ಯತೆ ನೀಡಬೇಕೆಂದು ಕುಮಾರ ಕೋರಿದರು.
ಅಸೋಶಿಯಷನ್ ಜಿಲ್ಲಾ ಕಾರ್ಯದರ್ಶಿ ಹಾಗೂ ನಗರ ಸಭೆ ನಾಮ ನಿರ್ದೇಶಿತ ಸದಸ್ಯ ಸುನಿಲ ಬಚ್ಚನ್ ಮಾತನಾಡಿ, ಭಾರತ ಸ್ವತಂತ್ರ ಬಂದಾಗಿನಿಂದ ಕ್ರೈಸ್ತ ಧರ್ಮೀಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿರುವರು. ಕಾಂಗ್ರೆಸ್ ಅಂದರೆ ಕ್ರಿಶ್ಚನ್, ಕ್ರಿಶ್ಚನ್ ಅಂದರೆ ಕಾಂಗ್ರೆಸ್ ಹೀಗೆ ಎರಡಕ್ಕೆ ಅಭಿನಾಭಾವ ಸಂಬಂಧವಿದೆ. ಆದರೆ ಕಾಂಗ್ರೆಸ್ ಪಕ್ಷವು ಕಲ್ಯಾಣ ಕರ್ನಾಟಕ ಭಾಗದಲ್ಲಿ 10 ಲಕ್ಷ ಜನಸಂಖ್ಯೆ ಇರುವ ನಮ್ಮ ಸಮುದಾಯಕ್ಕೆ ಯಾವ ಪ್ರಾತಿನಿಧ್ಯ ನೀಡದೇ ಇರುವುದು ವಿಪರ್ಯಾಸ. ಹಾಗಾಗಿ ಜೂನ್ ತಿಂಗಳ 13 ರಂದು ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಎಮ್.ಎಲ್.ಸಿ ಚುನಾವಣೆಯಲ್ಲಿ ಪಕ್ಷದ ನಿಷ್ಠೆಯುಳ್ಳ ಯುವ ನಾಯಕರಾದ ಎಸ್ ಪಿ ರಾಜಶೇಖರ ಅವರಿಗೆ ಮನ್ನಣೆ ನೀಡಬೇಕೆಂದು ಒತ್ತಾಯಿಸಿದರು.
ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅನಿಲ ನಿಡೋದಾ ಮಾತನಾಡಿ, ಕಾಂಗ್ರೆಸ್ ಪಕ್ಷದ ನಿಷ್ಠೂರ ಜನಾಂಗವೆಂದರೆ ನಾವು. ನಮ್ಮನ್ನು ಕಾಂಗ್ರೆಸ್ ನೇತೃತ್ವದ ಸಿದ್ದು ಸರಕಾರ ಕಡೆಗಣಿಸಿ ಬೇರೆ ಜನಾಂಗದವರಿಗೆ ಮನ್ನಣೆ ನೀಡುತ್ತಿರುವುದು ದಯನಿಯ ಬೆಳವಣಿಗೆ. ಈಗಲೂ ಕಾಲ ಮಿಂಚಿಲ್ಲ, ರಾಜಶೇಖರ ಅವರಿಗೆ ಎಮ್.ಎಲ್.ಸಿ ಮಾಡುವ ಮೂಲಕ ನಮ್ಮ ಮುನಿಸು ಶಮನಗೊಳಿಸಿ ಇಲ್ಲ ಅಂದರೆ ಕಾಂಗ್ರೆಸ್ ಪಕ್ಷ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾದಿತು, ಎಚ್ಚರವಿರಲಿ. ಸಮಾಜದ ಕೋಪಕ್ಕೆ ಗುರಿಯಾಗಬೇಡಿ. ರಾಜಶೇಖರ ಅವರಿಗೆ ಮನ್ನಣೆ ದೊರೆಯದಿದ್ದರೆ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.
ಪತ್ರಕರ್ತ ಶರದ್ ಘಂಟೆ, ಸಮಾಜದ ಮುಖಂಡರಾದ ಸಾವನ್ ಕೋಟೆ, ತಿಮೋತಿ ಸಾಯಿಮನ್, ರಾಬರ್ಟ್ ಸೇರಿದಂತೆ ಇತರರು ಪತ್ರಿಕಾಗೊಷ್ಟಿಯಲ್ಲಿದ್ದರು.