ಬಸವಣ್ಣನವರು ಸಮಾಜ ಸುಧಾರಕರಾಗಿದ್ದರು
ಚನ್ನಮ್ಮನ ಕಿತ್ತೂರು, ಮೇ 27: ವಿಶ್ವಗುರು ಬಸವಣ್ಣನವರ ಜೀವನದ ಆದರ್ಶಗಳನ್ನು ಇಂದಿನ ಯುವಪಿಳಿಗೆ ಜೀವನದಲ್ಲಿ ಅಳವಡಿಸಿಕೊಂಡರೆ ಅವರ ಭವಿಷ್ಯ ಬಂಗಾರವಾಗುವುದೆಂದು ಬೈಲೂರಿನ ಸರಕಾರಿ ಪ್ರೌಢ ಶಾಲೆ ಶಿಕ್ಷಕ ಮಂಜುನಾಥ ಕಳಸಣ್ಣವರ ಹೇಳಿದರು.
ಕಲ್ಮಠದ ಶ್ರೀ ಶಂಕರ ಚಂದರಗಿ ಸಭಾ ಭವನದಲ್ಲಿ ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ಮಾಸಿಕ ಶಿವಾನುಭವ ಮತ್ತು ಸುವರ್ಣ ಕರ್ನಾಟಕ ಸಂಭ್ರಮ ಅಂಗವಾಗಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವ ಜಯಂತಿ ಕುರಿತು ಉಪನ್ಯಾಸ ನೀಡಿದ ಅವರು, ವಚನ ಕ್ರಾಂತಿಯ ಹರಿಕಾರರಾಗಿದ್ದ ಬಸವಣ್ಣನವರು ಕೇವಲ ಒಬ್ಬ ದಾರ್ಶನಿಕ ವ್ಯಕ್ತಿಯಾಗಿರದೆ ಸಮಾಜ ಸುಧಾರಕ, ರಾಜಕೀಯ ಮುತ್ಸದ್ದಿ, ಧರ್ಮ ಸಂಸ್ಥಾಪಕ, ಶಿಕ್ಷಣ ತಜ್ಞರಾಗಿ ಮಾಡಿದ ಕಾರ್ಯಗಳು ಮತ್ತು ಕಾಯಕ ಕುರಿತು ಅವರು ನೀಡಿದ ವಿಚಾರಗಳು ಅನುಪಮವಾಗಿವೆ ಎಂದು ತಿಳಿಸಿದರು.
ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಜಿ.ಕೆ.ಭೂಮನಗೌಡರ ಬಸವಣ್ಣನವರು ಸಮಾಜಕ್ಕೆ ನೀಡಿದ ಕೊಡುಗೆಗಳು ಇಂದಿಗೂ ಅಜರಾಮರವಾಗಿ ಉಳಿದಿವೆ ಎಂದು ಬಸವಣ್ಣವರನ್ನು ಸ್ಮರಿಸಿದರು
ಸಾನಿಧ್ಯ ವಹಿಸಿ ಆರ್ಶೀವಚನ ನೀಡಿ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಜೀ 12ನೇ ಶತಮಾನದಲ್ಲಿ ಸ್ತ್ರೀ ಶೋಷಣೆ, ಜಾತೀಯತೆ, ಮೂಢ ನಂಬಿಕೆಗಳು, ವಿರುದ್ಧ ಹೋರಾಡಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದ ಮಹಾನ್ ಮಾನವತಾವಾದಿ ಬಸವಣ್ಣನವರು. ಈ ಕಾರಣದಿಂದಲೇ ಕರ್ನಾಟಕ ಸರಕಾರ ಇವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂದು ಗುರಿತಿಸಿದ್ದು ನಮಗೆಲ್ಲರಿಗೆ ಸಂತಸ ಉಂಟು ಮಾಡಿದೆ ಆದ್ದರಿಂದ ಅವರ ಆದರ್ಶಗಳನ್ನು ಪ್ರತಿದಿನ ಸ್ಮರಿಸಿಕೊಳ್ಳಬೇಕೆಂದರು.
ಇದಕ್ಕೂ ಪೂರ್ವ ವಿಶ್ವಗುರು ಬಸವಣ್ಣನವರ ಭಾವ ಚಿತ್ರಕ್ಕೆ ಪುಷ್ಪ ನಮನ ಅರ್ಪಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಇತ್ತೀಚೆಗೆ ಲಿಟಲ್ ಮಿಸ್ ಇಂಡಿಯಾ 2024 ರ ರನ್ನರ್ ಅಪ ಪ್ರಶಸ್ತಿಗೆ ಭಾಜನರಾದ ಕಿತ್ತೂರಿನ ಹೆಮ್ಮೆಯ ಕುವರಿ ಆರೋಹಿ ಮಲ್ಲಿಕಾರ್ಜುನ ಲಂಗೋಟಿ ಇವರನ್ನು ಸತ್ಕರಿಸಲಾಯಿತು.
ಎಂ.ಕೆ.ಹುಬ್ಬಳ್ಳಿ ಪಟ್ಣಣದ ಕುಮಾರ ವೈಭವ ವಾಲಿ ಇತ್ತೀಚೆಗೆ ನಡೆದ ಪಿ.ಯು.ಸಿ.ದ್ವಿತೀಯ ಪರೀಕ್ಷೆಯಲ್ಲಿ ಶೇ 98.5 ರಷ್ಟು ಅಂಕ ಗಳಿಸುವದರ ಜೊತೆಗೆ ಕನ್ನಡ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ ನಿಮಿತ್ತ ಅವಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಸಂಗೀತ ಶಿಕ್ಷಕರಾದ ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ಶ್ರೀಮತಿ ಶೋಭಾ ಪಾಶ್ಚಾಪೂರ ಸ್ವಾಗತಿಸಿದರು. ತಾಲೂಕ ಕಸಾಪ ಅಧ್ಯಕ್ಷ ಡಾ.ಎಸ್.ಬಿ.ದಳವಾಯಿ ಪ್ರಾಸ್ತಾವಿಕ ನುಡಿಗಳೊಂದಿಗೆ ಮಾಸಿಕ ಶಿವಾನುಭವದ ಉದ್ದೇಶಗಳನ್ನು ತಿಳಿಸಿದರು. ಕೃತಿ – ಅಕ್ಷರಾ ಇಬ್ಬರು ಜೊತೆ ಸೇರಿ ಬಸವಣ್ಣನವರ ವಚನ ಪಠಿಸಿದರು. ಬುದ್ಧ ಪೂರ್ಣಿಮಾ ನಿಮಿತ್ತವಾಗಿ ಅಖಿಲೇಶ ಮತ್ತು ಅಪೂರ್ವ ಕಳಸಣ್ಣವರ ಸಹೋದರರು ಬುದ್ಧ ಬಸವ ವೇಷ ಧರಿಸಿ ಸಂಭಾಷಣೆ ಎಲ್ಲರನ್ನು ಅಕರ್ಷಿಸಿತು. ಡಾ.ಜಿ.ಕೆ.ಭೂಮನಗೌಡರವರು ಬರೆದ ಕೋವಿಡ್ -19 ನಂತರ ಸಮಾಜ ಎಂಬ ಗ್ರಂಥವನ್ನು ಪೂಜ್ಯರು ಮತ್ತು ಅತಿಥಿಗಳು ಬಿಡುಗಡೆ ಮಾಡಿದರು. ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮ ಮಹಿಳಾ ಮಂಡಳದವರಿಂದ ಬಸವಣ್ಣನವರ ಕುರಿತಾದ ಗಾಯನ ನಡೆದವು. ಪ್ರಸಾದ ಸೇವೆ ಭುವನೇಶ್ವರಿ ಮತ್ತು ಶರಣ ಚಂದ್ರಶೇಖರಯ್ಯ ಇಂಚಗೇರಿಮಠ ದಂಪತಿಗಳು. ಮಹೇಶ್ವರ ಹೊಂಗಲ ವಂದಿಸಿದರು. ವಿವೇಕ ಕುರಗುಂದ ನಿರೂಪಿಸಿದರು.ಸಮಾರಂಭದಲ್ಲಿ ಕಿತ್ತೂರ ನಾಡಿನ ಶರಣ ಶರಣೆಯರು ಉಪಸ್ಥಿತರಿದ್ದರು.