ತಾಂತ್ರಿಕತೆ, ಸಂಶೋಧನೆಗಳು ರೈತರಿಗೆ ತಲುಪಬೇಕು
ಗುಳೇದಗುಡ್ಡ,ಮೇ27: ಬಾಗಲಕೋಟ ತೋಟಗಾರಿಕಾ ವಿಶ್ವವಿದ್ಯಾಲಯ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದು, ನೂರಕ್ಕಿಂತ ಹೆಚ್ಚು ತಾಂತ್ರಿಕ ಸಂಶೋಧನೆ ಮಾಡಿದೆ. ಆದರೆ ನಮ್ಮ ವಿಶ್ವವಿದ್ಯಾಲಯದ ವಿಸ್ತರಣಾ ಘಟಕದಲ್ಲಿನ ಸಿಬ್ಬಂದಿ ಕೊರತೆಯಿಂದ ತೋಟಗಾರಿಕೆ ಬೆಳೆಯಲ್ಲಿನ ಇಂದಿನ ತಾಂತ್ರಿಕತೆಯ ಜ್ಞಾನವನ್ನು ನಮ್ಮ ರೈತರಿಗೆ ಸರಿಯಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ. ಇಂದಿನ ತಂತ್ರಜ್ಞಾನವನ್ನು ಯಾವ ರೀತಿ ರೈತರಿಗೆ ತಲುಪಿಸಬೇಕು ಎಂದು ಚಿಂತನೆ ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ನಿಮ್ಮಂತಹ ಸಂಘಗಳ ನೆರವಿನೊಂದಿಗೆ ಸಾಧಕ ರೈತರ ಮಾರ್ಗದರ್ಶದಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ತೋಟಗಾರಿಕಾ ಬೆಳೆಗಳಲ್ಲಿ ಮುಂದುವರಿದ ಇಂದಿನ ತಾಂತ್ರಿಕತೆಯನ್ನು ತಲುಪಿಸಲು ನೆರವಾಗುತ್ತದೆ ಎಂದು ಬಾಗಲಕೋಟ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ವಿಷ್ಣುವರ್ಧನ ಹೇಳಿದರು.
ಅವರು ಸಮೀಪದ ಇಂಜನವಾರಿ ಗ್ರಾಮದ ತಿಪ್ಪಣ್ಣ ಗೌಡರ ಅವರ ತೋಟದಲ್ಲಿ ಸ್ನೇಹ ಪ್ರೀತಿ ನಿಮ್ಮೊಂದಿಗೆ ವಾಟ್ಸ್‍ಪ್ ಗ್ರುಪ್ ವತಿಯಿಂದ ಹಮ್ಮಿಕೊಂಡಿದ್ದ ರೈತ ಸಮ್ಮೀಲನ ಕಾರ್ಯಕ್ರಮದಲ್ಲಿ ಮಾತನಾಡಿ, ತೋಟಗಾರಿಕೆಯ ಬೆಳೆಗಳ ಬಗ್ಗೆ ಯಾವುದೇ ಸಮಸ್ಯೆ ಕಂಡುಬಂದಲ್ಲಿ ರೈತರ ಜಮೀನಿನಲ್ಲೇ ಆ ಸಮಸ್ಯೆ ಬಗೆಹರಿಸಲು ನಮ್ಮ ಸಂಶೋಧನೆ, ತಂತ್ರಿಕತೆಯ ನೆರುವು ನೀಡುತ್ತೇವೆ. ಇದಕ್ಕೆ ಬೇಕಾದ ಪ್ರಾತ್ಯಕ್ಷಿತೆ, ತರಬೇತಿ ರೈತರಿಗೆ ನೀಡಲಾಗವುದು ಎಂದರು.
ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಮಹೇಶ್ವರಪ್ಪ ಮಾತನಾಡಿ, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳು ಇಂದು ಕಬ್ಬಿನಬೆಳೆಯಿಂದ ತುಂಬಿದೆ. ಆದರೆ ರೈತರು ಈ ಜಿಲ್ಲೆಗಳಲ್ಲಿ ಕಬ್ಬಿಗೆ ಪರ್ಯಾಯವಾಗಿ ತೋಟಗಾರಿಕಾ ಬೆಳಗೆಳನ್ನು ಬೆಳೆಯಬೇಕು. ಈ ಬಗ್ಗೆ ರೈತರ ಸಭೆಗಳನ್ನು ಮಾಡಿ ರೈತರಿಗೆ ತಿಳುವಳಿಕೆ ನೀಡುತ್ತಿದ್ದೇವೆ. ಸಮಗ್ರ ಕೃಷಿ ಪದ್ಧತಿಯತ್ತ ನಾವು ಹೋಗಬೇಕು. ಯುವ ರೈತರು ಈ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಇದೇ ಸಂದರ್ಭದಲ್ಲಿ 18 ಜಿಲ್ಲೆಗಳಿಂದ ಬಂದಿದ್ದ ಕೃಷಿ ಸಾಧಕರು ತಮ್ಮ ತೋಟದಲ್ಲಿ ಬೆಳೆದ ಜೇನು, ಸಗಣಿಯಿಂದ ತಯಾರಿಸಿದ ಗಣಪತಿ ಮೂರ್ತಿಗಳು, ದೂಪ, ಸೊಳ್ಳೆಬತ್ತಿಗಳು, ವಿಭೂತಿ, ಗೋಆರ್ಕ, ಬೆರಣಿ, ತುಪ್ಪ ಮತ್ತಿತರ ಸಾಮಾಗ್ರಿಗಳನ್ನು ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತ ಮಹಿಳೆ ಕಮತಗಿಯ ಪುಷ್ಪಾ ಅಂಗಡಿ ಅವರು ಉತ್ಪಾದಿಸಿದ ಜೇನುತುಪ್ಪದ ಬಾಟಲಿಗಳನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ತೊಟಗಾರಿಕಾ ಇಲಾಖೆಯಿಂದ ಗೋಷ್ಠಿಗಳು ನಡೆದವು.
ಈ ಸಂದರ್ಭದಲ್ಲಿ ಸ್ನೇಹಾ ಪ್ರೀತಿ ನಿಮ್ಮೊಂದಿಗೆ ತಂಡದ ಅಧ್ಯಕ್ಷ ಕಾಡಪ್ಪ ಪೈರಾಸಿ, ಗೌರವಾಧ್ಯಕ್ಷ ರೂಪೇಶ ಕಾಮತ್, ಕರಿಯಪ್ಪ ಕಿತ್ತೂರ, ಲಕ್ಷ್ಮಣ ಹಿಡಕಲ್ಲ, ತಿಪ್ಪಣ್ಣ ಗೌಡರ, ಈರಯ್ಯ ಸೂಳಿಕೇರಿ, ಎನ್.ಎಸ್. ದೇಸಾಯಿ, ಪುಷ್ಪಾ ಅಂಗಡಿ, ಶಿವನಗೌಡರ ತಿಪ್ಪನಗೌಡರ, ಪ್ರಭುಗೌಡ ಪಾಟೀಲ, ಬೀರಯ್ಯ ಸೂಳಿಕೇರಿ, ಚಿದಾನಂದ ಹಂದಿಗೊಂದ, ಮಹಾದೇವ ಮಾಲಗಾವಿ, ಬಿ.ಎಂ. ಪಾಟೀಲ, ರಂಗು ಕಸ್ತೂರಿ, ಸುರಾನ ಸೋಮಗೊಂಡ, ಸಚಿನ ಸಿದ್ನಾಳ, ಬಸವರೆಡ್ಡಿ, ನಿಂಗಪ್ಪ ಬೀರನಗಡ್ಡಿ, ಸುಮೀತ ಉಳ್ಳಾಗಡ್ಡಿ, ಸುಭಾಷ ಕಂದಕೂರ ಮತ್ತಿತರರು ಇದ್ದರು.