ಮಾನಸಿಕ ಅಸ್ವಸ್ಥತೆಗೆ ಪರಿಹಾರ ಹುಡುಕಿ: ನ್ಯಾ.ಮೊಹಮ್ಮದ್
ಚಿಕ್ಕಬಳ್ಳಾಪುರ,ಮೇ.೨೭: ಸ್ಕಿಜೋಫೋರ್ನಿಯಾದಂತಹ ಮಾನಸಿಕ ಅಸ್ವಸ್ಥತೆ ಖಾಯಿಲೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ಚಿಕಿತ್ಸಾ ಪರಿಹಾರೋಪಾಯಗಳ ಕುರಿತು ತಿಳಿಸಿಕೊಡಬೇಕಿದೆ ಎಂದು ಪ್ರಧಾನ ಸಿವಿಲ್ ನಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮೊಹಮ್ಮದ್ ರೋಷನ್ ಷಾ ಅವರು ತಿಳಿಸಿದರು.
ಜಿಲ್ಲಾಡಳಿತ ಭವನದ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ಅಸ್ವಸ್ಥ ರೋಗ ಲಕ್ಷಣಗಳು ಕಂಡು ಬಂದಾಗ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು. ಆದರೆ ಹಲವರು ಮೂಡನಂಬಿಕೆಗಳಿಗೆ ಜೋತುಬಿದ್ದು ಚಿಕಿತ್ಸೆಗೆ ಮುಂದಾಗದಿರುವುದು ನೋಡುತಿದ್ದೇವೆ. ರೋಗ ಉಲ್ಬಣಗೊಂಡಾಗ ವೈದ್ಯರಲ್ಲಿ ತೆರಳುವುದು ಸಾಮಾನ್ಯವಾಗಿದೆ. ಇಂತಹ ಉದಾಸೀನ ತೋರದೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ಮಾಡಿದರು.
ದಿನ ನಿತ್ಯದ ಜೀವನದಲ್ಲಿ ಸಾಕಷ್ಟು ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗ, ಆರ್ಥಿಕ, ಸಾಮಾಜಿಕವಾಗಿ ಯಾವುದೇ ಸಮಸ್ಯೆಗಳಿರಲಿ ಸಮಚಿತ್ತದಿಂದ ಎಲ್ಲವನ್ನೂ ಸ್ವೀಕರಿಸಿ ಪರಿಹರಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಬೇಕಿದೆ ಎಂದು ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ಅವರು ತಿಳಿಸಿದರು.
ಇದೇ ವೇಳೆ ಸ್ಕಿಜೋಫ್ರೀನಿಯಾ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್ ನ್ನು ಗಣ್ಯರು ಬಿಡುಗಡೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣಧಿಕಾರಿ ಡಾ. ಮಹೇಶ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಮಂಜುಳದೇವಿ, ಜಿಲ್ಲಾ ಮಾನಸಿಕ ನಿಯಂತ್ರಣಾಧಿಕಾರಿ ಡಾ. ಶಿವಕುಮಾರ್, ಜಿಲ್ಲಾ ಸರ್ವೇಕ್ಷಣಾಕಾರಿ ಡಾ. ಕೃಷ್ಣಪ್ರಸಾದ್, ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎನ್.ಪ್ರಕಾಶ್, ಜಿಲ್ಲಾ ಕುಂಟುಂಬ ಕಲ್ಯಾಣಧಿಕಾರಿ ಡಾ. ಚಂದ್ರಶೇಖರ್ ರೆಡ್ಡಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವೈಜ್ಞಾನಿಕ ಚಿಕಿತ್ಸೆಯಿಂದ ಸ್ವಾಸ್ಥ್ಯ ಸಮಾಜ
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಮಾತನಾಡಿ, ಮಾನಸಿಕ ಅಸ್ವಸ್ಥತೆಯ ತೊಂದರೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ವೈಜ್ಞಾನಿಕ ಚಿಕಿತ್ಸೆ ಪಡೆದರೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ. ಹೀಗಾಗಿ ನಿರ್ಲಕ್ಷ್ಯ ತೋರದೆ ಸೂಕ್ತ ಚಿಕಿತ್ಸೆ ಔಷದೋಪಚಾರ ಪಡೆಯಬೇಕು ಎಂದರು.
ಸ್ಕಿಜೋಫ್ರೀನಿಯಾ ರೋಗ ಲಕ್ಷಣಗಳು ಇದರ ಚಿಕಿತ್ಸೆ, ಅರೈಕೆ ಬಗ್ಗೆ ವ್ಯಾಪಕವಾಗಿ ಜನರಿಗೆ ತಿಳಿಸಿಕೊಡಬೇಕಿದೆ. ಆರೋಗ್ಯ ಇಲಾಖೆ ಜಾಗೃತಿ ಮೂಡಿಸುವ ಕಿರುಚಿತ್ರ, ಕರಪತ್ರಗಳನ್ನು ಮುದ್ರಿಸಿದ್ದು, ಇವುಗಳನ್ನು ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಜನತೆಗೆ ತಲುಪಿಸಬೇಕಿದೆ. ಸ್ಕಿಜೋಫ್ರೀನಿಯಾ ನಿವಾರಣೆಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತಿಳಿಸಿದರು.ಸಮಾಜ, ಕುಟುಂಬದಲ್ಲಿ ಉತ್ತಮ ಬಾಂಧವ್ಯ ಹೊಂದಬೇಕು. ಭ್ರಮಾಲೋಕದಲ್ಲಿ ತೇಲದೆ ವಾಸ್ತವವನ್ನು ಒಪ್ಪಿಕೊಳ್ಳಬೇಕು. ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಬೇಕು. ಮೊಬೈಲ್ ನ್ನು ಅಗತ್ಯವಿರುವಷ್ಟು ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿಯವರು ಸಲಹೆ ನೀಡಿದರು.