ಮಾನವನಿಗೆ ಮಾನಸಿಕ ನೆಮ್ಮದಿ ಮುಖ್ಯ: ಶಾಸಕ ಮಂಜು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.27: ಮಾನವನಿಗೆ ಹಣ,ಆಸ್ತಿ,ಹೆಸರು,ಕೀರ್ತಿ ಎಷ್ಟೇ ಇದ್ದರು ಅವನಿಗೆ ಮಾನಸಿಕ ನೆಮ್ಮದಿ ಮತ್ತು ಮನಶಾಂತಿ ಅಗತ್ಯವಾಗಿದ್ದು ಅದನ್ನು ಜನರಿಗೆ ತುಂಬುವ ಕೆಲಸವನ್ನು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳು ಮಾಡುತ್ತಿವೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸುಭಾಷ್‍ನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ನೂತನ ಧ್ಯಾನಮಂದಿರ ಹಾಗೂ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ದೇವರೊಬ್ಬ ನಾಮಹಲವು ಎಂಬ ತತ್ವದಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳು ಮಾನವನಿಗೆ ಶಾಂತಿ, ಸಹನೆ, ತುಂಬುವ ಮೂಲಕ ಆದ್ಯಾತ್ಮಿಕ ಚಿಂತನೆಗಳನ್ನು ಬೆಳೆಸುತ್ತಿದೆ. ಆ ಮೂಲಕ ಮಾನವನನ್ನು ದೇವಮಾನವನನ್ನಾಗಿ ರೂಪುಗೊಳ್ಳುವಂತೆ ಮಾಡುತ್ತಿವೆ. ವಿಶ್ವಶಾಂತಿಗಾಗಿ ಈ ಸಂಸ್ಥೆಗಳು ಮಾಡುತ್ತಿರುವ ಸೇವಾ ಕಾರ್ಯಗಳು ಆದ್ಯಾತ್ಮ ಮತ್ತು ನೆಮ್ಮದಿಯ ಕಡೆಗೆ ನಮ್ಮನ್ನು ಕರೆದೋಯ್ಯುತ್ತಿವೆ. ಇಲ್ಲಿನ ಹಳೆಯ ಕಟ್ಟಡವನ್ನು ಕೆಡವಿ ಎರಡು ಅಂತಸ್ತುಗಳನ್ನು ನಿರ್ಮಾಣ ಮಾಡಿದರೆ ಧ್ಯಾನಕೇಂದ್ರ ಹಾಗೂ ಮನೆ ಅಥವಾ ಕಛೇರಿ ಕೆಲಸಕಾರ್ಯಗಳಿಗೆ ಸುಲಭವಾಗಲಿದೆ ಎಂಬ ದೃಷ್ಟಿಯಿಂದ ನೂತನ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಹೇಳುವ ಒಂದೊಂದು ಮಾತುಗಳು ನೈಜತೆಯಿಂದ ಕೂಡಿರುತ್ತವೆ. ನಾನೂ ಸಹ ಈ ಸಂಸ್ಥೆಯ ಸಹಸದಸ್ಯನಾಗಿ ಇರಲು ಇಚ್ಚಿಸುತ್ತೇನೆ ಎಂದರು.
ಸಮಾಜಸೇವಕ ಹಾಗೂ ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ 140 ದೇಶಗಳಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳ ಧ್ಯಾನಕೇಂದ್ರಗಳಿದ್ದು ಬಾಹ್ಯ ಒತ್ತಡಗಳಿಂದ ಜರ್ಜರಿತವಾಗಿರುವ ಮಾನವನಿಗೆ ಒತ್ತಡಗಳನ್ನು ನಿವಾರಿಸಿ ಮಾನಸಿಕ ನೆಮ್ಮದಿಯನ್ನು ತುಂಬುವ ಕೆಲಸವನ್ನು ಮಾಡುತ್ತಿವೆ. ತಾಲ್ಲೂಕು ಕೇಂದ್ರದಲ್ಲಿ ಎರಡು ಅಂತಸ್ತಿನ ಭವ್ಯವಾದ ಕಟ್ಟಡ ನಿರ್ಮಿಸಿ ತಾಲ್ಲೂಕಿನ ಜನರಿಗೆ ಮಾನಸಿಕ ನೆಮ್ಮದಿ ಮತ್ತು ಮನಶಾಂತಿಯನ್ನು ಒದಗಿಸಲು ಶ್ರಮಿಸುತ್ತಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಡಳಿತಮಂಡಳಿಗೆ ಧನ್ಯವಾದಗಳು. ತಾಲ್ಲೂಕಿನ ಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮೈಸೂರು ವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಲಕ್ಷ್ಮೀಜಿ, ಸ್ಥಳೀಯ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿ.ಕೆ.ಸವಿತ, ವಿವಿಧ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಸಂಚಾಲಕರು ಜಿ.ಪಂ.ಮಾಜಿ ಉಪಾದ್ಯಕ್ಷ ಅಂಬರೀಶ್, ಡಾ.ದಿವಾಕರ್, ಪುರಸಭಾ ಮಾಜಿ ಸದಸ್ಯ ಕೆ.ಆರ್.ಪುಟ್ಟಸ್ವಾಮಿ, ರಮೇಶ್‍ಗೌಡ, ಧನೇಂದ್ರಗೌಡ, ಮೋಹನ್, ಶಿಕ್ಷಕಿ ಸುಧಾಮಣಿದಿವಾಕರ್, ಪ್ರೆಸ್ ಪ್ರಭಣ್ಣ ಸೇರಿದಂತೆ ಹಲವರಿದ್ದರು.