ಆಲನಹಳ್ಳಿ ರಾಜಕಾಲುವೆ ಒತ್ತುವರಿ ತೆರವು
ಸಂಜೆವಾಣಿ ನ್ಯೂಸ್
ಪಿರಿಯಾಪಟ್ಟಣ: ಒತ್ತುವರಿಯಾಗಿದ್ದ ರಾಜಕಾಲುವೆಯನ್ನು ತೆರವುಗೊಳಿಸಿ ನೀರು ಅಡೆತಡೆಯಿಲ್ಲದಂತೆ ಹರಿದು ಹೋಗಲು ಅನುವು ಮಾಡಿಕೊಟ್ಟಿರುವ ಘಟನೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಗ್ರಾಮದಲ್ಲಿದ್ದ ರಾಜಕಾಲುವೆಯು ಒತ್ತುವರಿಯಾಗಿದ್ದ ಕಾರಣ ನೀರು ಅಂಬೇಡ್ಕರ್ ಕಾಲೋನಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ನಿವಾಸಿಗಳು ಪರದಾಡುವಂತೆ ಮಾಡಿತ್ತು. ಇದರಿಂದ ಆಕ್ರೋಶಗೊಂಡ ನಿವಾಸಿಗಳು ಮಳೆಬಂದಾಗಲೆಲ್ಲ ತಾವು ಅನುಭವಿಸುತ್ತಿರುವ ಸಮಸ್ಯೆಯನ್ನು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರ ಗಮನಕ್ಕೆ ತಂದಿದ್ದಲ್ಲದೆ, ಈ ಸಂಬಂಧ ದೂರು ನೀಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು.
ಕಾಲೋನಿ ನಿವಾಸಿಗಳ ಮನವಿಗೆ ಸ್ಪಂದಿಸಿದ ಸಚಿವರು ತಹಶೀಲ್ದಾರ್ ಕೆ.ಸುರೇಂದ್ರ ಮೂರ್ತಿ ಹಾಗೂ ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶಿಸಿದ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿ ಅಧಿಕಾರಿ ವರ್ಗ ಒತ್ತುವರಿ ಆಗಿರುವ ಸರ್ಕಾರಿ ಕರಾಬು ಜಾಗದಲ್ಲಿನ ರಾಜ ಕಾಲುವೆಯನ್ನು ತೆರವುಗೊಳಿಸಿದರು.
ಈ ಸಂದರ್ಭ ಸರ್ವೆಯರ್ ಗಿರೀಶ್, ಕಂದಾಯ ಅಧಿಕಾರಿ ಪಾಂಡುರಂಗ, ಹುಣಸವಾಡಿ ಗ್ರಾ.ಪಂ ಪಿಡಿಒ ಮಂಜುನಾಥ್, ಗ್ರಾಮ ಲೆಕ್ಕಿಗರಾದ ಸೋಮಶೇಖರ್ ಮತ್ತು ಸಿದ್ದರಾಜು ಸಿಬ್ಬಂದಿ ಮಂಜು ದೊಡ್ಡಯ್ಯ ಇದ್ದರು.