ವೀರ ಸಾವರ್ಕರ್ ಸಮ್ಮಾನ್: 141ನೇ ಸಾವರ್ಕರ್ ಜಯಂತಿ
ಸಂಜೆವಾಣಿ ನ್ಯೂಸ್
ಮೈಸೂರು.ಮೇ.27:- ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್ ವಿಚಾರಧಾರೆಗಳ ಕುರಿತು ಜನರನ್ನು ತಲುಪಲು ಸಾವರ್ಕರ್ ಪ್ರತಿಷ್ಠಾನ ಮೈಸೂರು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಒಂದು ಲಕ್ಷ ನಗದು, ವೀರ ಸಾವರ್ಕರ್ ರವರ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರವುಳ್ಳ ಪ್ರತಿಷ್ಠಿತ “ವೀರ ಸಾವರ್ಕರ್ ಸಮ್ಮಾನ್” ಪ್ರಶಸ್ತಿಯನ್ನು 141ನೇ ಸಾವರ್ಕರ್ ಜಯಂತಿಯಂದು ನೀಡಲಾಗುತ್ತಿದೆ.
ಭಾಷಣ ಹಾಗೂ ಲೇಖನಗಳಿಂದ ಯುವ ಪೀಳಿಗೆಯ ಜನರಲ್ಲಿ ದೇಶಭಕ್ತಿ ಜಾಗೃತಗೊಳಿಸಿ ಅವರನ್ನು ನದಿ ಸ್ವಚ್ಛತೆ, ದೇಗುಲ ಜೀರ್ಣೋದ್ದಾರ, ಗೋಪಾಲನೆ, ಬಡವರಿಗೆ ಮನೆ ನಿರ್ಮಾಣ, ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಸೇರಿ ಸೇವಾ ಕ್ಷೇತ್ರದೆಡೆಗೆ ಆಕರ್ಷಿಸಿ ಯುವ ಬ್ರಿಗೇಡ್ ಸಂಘಟನೆಯನ್ನು ಕಟ್ಟುತ್ತಿರುವ ಚಕ್ರವರ್ತಿ ಸೂಲಿಬೆಲೆಯವರಿಗೆ ಈ ವರ್ಷದ “ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ -2024” ಯನ್ನು ನೀಡಲಾಗುತ್ತಿದೆ.
ಈ ಪ್ರಶಸ್ತಿಯನ್ನು ದಿನಾಂಕ 28-05-2024ರ ಮಂಗಳವಾರ ಸಂಜೆ 5-30ಕ್ಕೆ ನಗರದ ಕರ್ನಾಟಕ ಕಲಾಮಂದಿರ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಕಾರ್ಯಕ್ರಮದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತರು ಖ್ಯಾತ ಸಾಹಿತಿಗಳಾದ ಡಾ| ಎಸ್.ಎಲ್.ಭೈರಪ್ಪ ರವರು ಉಪಸ್ಥಿತರಿರುತ್ತಾರೆ.
ಮುಖ್ಯ ಭಾಷಣಕಾರರಾಗಿ ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ಆಗಮಿಸುತ್ತಿದ್ದಾರೆ.
ಈ ಕಾರ್ಯಕ್ರಮಕ್ಕೂ ಮುನ್ನ ಮಧ್ಯಾಹ್ನ 2 ಗಂಟೆ?ಗೆ ಸಾವರ್ಕರ್ ವೇಷಭೂಷಣ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಗಳು ನಡೆಯಲಿದೆ. ಈಗಾಗಲೇ ಮೊಬೈಲ್ ಮೂಲಕ ಸಾವರ್ಕರ್ ಕುರಿತು ಮಾಡಿರುವ ರೀಲ್ಸ್ ಗಳನ್ನು ಪಡೆಯಲಾಗುತ್ತಿದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 5000, ದ್ವಿತೀಯ ಬಹುಮಾನವಾಗಿ 3000 ತೃತೀಯ ಬಹುಮಾನವಾಗಿ ರೂ.1000 ಜೊತೆಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಸಹ ನೀಡಲಾಗುತ್ತದೆ.
ಸಾವರ್ಕರ್ ಕುರಿತು ಅನೇಕ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿರುವ ವಿಕ್ರಂ ಸಂಪತ್ ರವರಿಗೆ ಕಳೆದ ವರ್ಷ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ – 2023” ಯನ್ನು ನೀಡಲಾಗಿತ್ತು.
ಸಾವರ್ಕರ್ ಪ್ರತಿಷ್ಠಾನ ಮೈಸೂರು ಅನೇಕ ಕಾರ್ಯಕ್ರಮಗಳ ಮೂಲಕ ಸಾವರ್ಕರ್ ವಿಚಾರಧಾರೆಗಳನ್ನು ಜನರ ಮುಂದಿಡುತ್ತಾ ಬಂದಿದೆ. ‘ಸಾವರ್ಕರ್ ರಥಯಾತ್ರೆ’ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಿ ಸಾವರ್ಕರ್ ಕುರಿತ ಮಾಹಿತಿ, ಸಾಹಿತ್ಯ ಹಾಗೂ ಪುಸ್ತಕಗಳ ಮೂಲಕ 10 ಲಕ್ಷಕ್ಕೂ ಅಧಿಕ ಜನರನ್ನು ತಲುಪಿತು, ಸಾವರ್ಕರ್ ಕುರಿತ ಕನ್ನಡದ ನಾಟಕ `ಕರಿನೀರ ವೀರ’ ರಾಜ್ಯಾದ್ಯಂತ ಅನೇಕ ಪ್ರದರ್ಶನ ನಡೆಸಿ ಜನಮನ ಗೆದ್ದಿದೆ, ವಿದ್ಯಾರ್ಥಿಗಳಿಗಾಗಿ ಸಾವರ್ಕರ್ ಪ್ರಬಂಧ, ಭಾಷಣ, ಚಿತ್ರಕಲೆ ಹೀಗೆ ಅನೇಕ ಸ್ಪರ್ಧೆಗಳನ್ನು ಹಲವಾರು ಶಾಲಾ ಕಾಲೇಜು ಗಳಲ್ಲಿ ಆಯೋಜಿಸಿ ಅವರುಗಳಲ್ಲಿ ಸಾವರ್ಕರ್ ವ್ಯಕ್ತಿ ಹಾಗೂ ವಿಚಾರಗಳನ್ನು ಪರಿಚಯಿಸುವ ಕೆಲಸಗಳನ್ನು ಸಾವರ್ಕರ್ ಪ್ರತಿಷ್ಠಾನ ಮೈಸೂರು ಮಾಡುತ್ತಾ ಬರುತ್ತಿದೆ.
ಈ ಎಲ್ಲ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ರಾಕೇಶ್ ಭಟ್: 9916221184, ರಜತ್ : +91 6363-443699 ಶಿವಕುಮಾರ್: 8660219746 ಸಂಪರ್ಕಿಸಬೇಕೆಂದು ತಮ್ಮ ಪತ್ರಿಕೆಯ ಓದುಗರಲ್ಲಿ ವಿನಂತಿಸುತ್ತೇವೆ.
ಈ ಎಲ್ಲಾ ಕಾರ್ಯಕ್ರಮದ ಕುರಿತು ತಮ್ಮ ಘನ ಪತ್ರಿಕೆ ವಾಹಿನಿಗಳಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಸಾವರ್ಕರ್ ಪ್ರತಿಷ್ಠಾನ ಮೈಸೂರು ಸದಸ್ಯರಾದ ರಾಕೇಶ್ ಭಟ್, ಶಿವಕುಮಾರ್ ಚಿಕ್ಕಕಾನ್ಯ, ಕೆ.ಎಂ.ನಿಶಾಂತ್, ಟಿ.ಎಸ್.ಅರುಣ್ ಹಾಗೂ ಟಿ.ಪಿ.ಮಧುಸೂದನ್ ಉಪಸ್ಥಿತರಿದ್ದರು.