ಧರೆಗುರುಳಿದ ತ್ಯಾಜ್ಯ ಸಂಸ್ಕರಣಾ ಘಟಕ: ಶಾಸಕ ಅಲ್ಲಂಪ್ರಭು ಪಾಟೀಲ್‌ ಭೇಟಿ
ಕಲಬುರಗಿ:ಮೇ.26:ಬಿರುಗಾಳಿಗೆ ಮುರಿದು ಬಿದ್ದ ಕಲಬುರಗಿ ನಗರದ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಪಾಲಿಕೆ ಅಧಿಕಾರಿ ಆರ್‌ಪಿ ಜಾಧವ್‌ ಬಿರುಗಾಳಿ ಜೋರಾಗಿ ಬೀಸಿದಾಗ ಮುಂದೆ ಕಸದ ಗುಡ್ಡೆ ಇದ್ದ ಕಾರಣ ಅಲ್ಲಿಂದ ಸಾಗದೆ ಹಿಂದೆ ಒತ್ತಡ ಹುಟ್ಟಿಕೊಂಡಿದೆ ಇದರಿಂದಲೇ ತ್ಯಾಜ್ಯ ಘಟಕದ 16 ಕಂಬಗಲು ಮುರಿದಿವೆ. ಘಟಕ ಕುಸಿದಿದೆ ಎಂದರು.
ಆದರೆ ಸ್ಥಳದಲ್ಲಿನ ಕಾಮಗಾರಿ, ಘಟಕದಲ್ಲಿನ ಕಂಬಗಳನ್ನೆಲ್ಲ ಗಮನಿಸಿದ ಶಾಸಕರು ಗಾಳಿ ಒತ್ತಡ ಹುಟ್ಟಿದ್ದರೆ ಮೇಲಿನ ಪತ್ರಾಗಳು ಹಾರಬೇಕಿತ್ತು. ಕಂಬಗಳೇ ಮುರಿದಿವೆಯಲ್ಲ, ಗುಣಮಟ್ಟ ಪರೀಕ್ಷೆ ನಡೆಸಿರಿ , ನುರಿತ ತತ್ವಜ್ಞರಿಂದ ವರದಿ ಪಡೆಯಿರಿ. ನಂತರ ಪರಿಹಾರ ಕ್ರಮಗಳಿಗೆ ಮುಂದಾಗಿರಿ ಎಂದರು.
ಅಲ್ಲಿಂದಲೇ ನಗರಾಭಿವೃದ್ಧಿ ಇಲಾಖೆ ಸಚಿವರಾದ ಸರೇಶ ಭೈರತಿಯವರನ್ನು ಸಂಪರ್ಕಿಸಿದ ಶಾಸಕರು ಕಲಬುರಗಿಯ ಈ ಘಟನೆ ವಿವರಿಸುತ್ತ ಸದರಿ ಬೆಳವಣಿಗೆಯ ಬಗ್ಗೆ ಅಗತ್ಯ ಪರಿಹಾರ ಕ್ರಮಗಳಿಗೆ , ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವಂತೆ ಕೋರಿದರು.
ಕಲಬರಗಿಯಲ್ಲಿ ಘನ ತ್ಯಾಜ್ಯ ವಿಲೇವಾರಿಯೇ ಸಮಸ್ಯೆಯಾಗಿದೆ. ಈ ಘಟಕ ಪೂರ್ಣ ಪ್ರಮಾಣದ ಕೆಲಸ ಆರಂಭಕ್ಕೂ ಮುನ್ನವೇ ಕುಸಿದಿದೆ. ಮತ್ತೆ ತ್ಯಾಜ್ಯ ವಿಲೇವಾರಿಗೆ ಅಡಚಣೆ ಬರಲಿದೆ. ಈಗಾಗಲೇ ಇಲ್ಲಿ ಕಸ ಸಂಗ್ರಹದಿಂದ ಅಂತರ್ಜಲ ಮಲೀನವಾಗಿದೆ. ಪರಿಸರ ಹಾಳಾಗಿದ, ನಾಯಿಗಳ ಕಾಟ ಉದನೂರು ಹಾಗೂ ಸುತ್ತಮುತ್ತ ಕಾಡುತ್ತಿದೆ. ತಕ್ಷಣ ಘಟಕ ದುರಸ್ಥಿಯಾಗಬೇಕು. ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದು ಶಾಸಕರು ಸಚಿವರ ಗಮನ ಸೆಳೆದರು.
ಕಲಬುರಗಿ ಕಸವನ್ನು ಉದನೂರ್‌ ಬಳಿಯ ಕಸ ಸಂಗ್ರಹಗಾರದಲ್ಲಿ ರಾಶಿ ಹಾಕಿ ನಂತರ ಸಂಸ್ಕರಣೆ ಮಾಡುವ ಯೋಜನೆಯೇ ಇದಾಗಿತ್ತು. ಇದೀಗ ಯೋಜನೆಯ ಮುಖ್ಯ ಶೆಡ್‌ ಕುಸಿದಿದೆ. ಹೀಗಾಗಿ ಸಂಸ್ಕರಣೆ ಸಮಸ್ಯೆ ಕಾಡಲಿದೆ. ಈಗಾಗಲೇ ಕಸದಿಂದಾಗಿ ಈ ಹಳ್ಳಿಗಳಲ್ಲಿ ಸಮಸ್ಯೆಗಳು ಕಾಡುತ್ತಿವೆ. ಬರುವ ದಿನಗಳಲ್ಲಿ ಆದಷ್ಟು ಬೇಗ ಸಂಸ್ಕರಣೆ ಘಟಕ ರಿಪೇರಿಗೊಂಡು ಪೂರ್ಣ ಕೆಲಸ ಮಾಡುವಂತೆ ಕ್ರಮ ಜರುಗಿಸಬೇಕು ಎಂದು ಶಾಸಕ ಅಲ್ಲಂಪ್ರಭು ಪಾಟೀಲರು ಪಾಲಿಕೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.
ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಲಿಂಗರಾಜ ಕಣ್ಣಿ, ನಾಗೇಂದ್ರ ಶೇರಿಕಾರ್‌, ಉದನೂರು ಗ್ರಾಮದ ಮುಖಂಡರು, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.