ಮತ್ತೊಬ್ಬರ ಕಣ್ಣೀರನ್ನು ಒರೆಸುವವ ದೊಡ್ಡ ವ್ಯಕ್ತಿ
ಕಲಬುರಗಿ:ಮೇ.26: ಉನ್ನತ ಅಧಿಕಾರ, ಸ್ಥಾನಮಾನ, ಹೆಚ್ಚಿನ ಹಣ, ಸಂಪತ್ತು, ಆಸ್ತಿ ಹೊಂದಿದವರು ದೊಡ್ಡವರಾಗುವುದಿಲ್ಲ. ಬದಲಿಗೆ ಸಮಾಜದಲ್ಲಿರುವ ಬಡವರು, ಅಸಹಾಯರು, ಅನಾಥರು, ತುಳಿತಕ್ಕೆ ಒಳಗಾದವರು, ನಿರ್ಗತಿಕರಿಗೆ ಸಹಾಯ ಮಾಡಿ, ಅವರ ದುಃಖವನ್ನು ಕಳೆಯುವ, ಕಣ್ಣೀರನ್ನು ಒರೆಸುವ ವ್ಯಕ್ತಿ ನಿಜವಾಗಿಯೂ ದೊಡ್ಡವರಾಗುತ್ತಾರೆ. ಮಹಾತ್ಮ ಗೌತಮ ಬುದ್ಧ, ವಿಶ್ವಗುರು ಬಸವಣ್ಣ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ಸಾಲಿನಲ್ಲಿ ಅಗ್ರಗಣ್ಯರಾಗುತ್ತಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಶ್ರೀ ವಿವೇಕಾನಂದ ಕೋಚಿಂಗ್ ತರಬೇತಿ ಕೇಂದ್ರ’ದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವ್ಯಕ್ತಿತ್ವ ವಿಕಸನ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶ್ರೇಷ್ಟ ವ್ಯಕ್ತಿತ್ವ ಹೊಂದಬೇಕಾದರೆ, ಅಹಂಕಾರ, ಕೋಪ, ಅಸೂಯೆ ರಹಿತ, ಜಾತಿ, ವರ್ಗಗಳಿಗೆ ಆದ್ಯತೆಯನ್ನು ನೀಡದೆ, ಮಾನವೀಯತೆಯ ಅಳವಡಿಕೆ, ಸದಾ ಪ್ರಜ್ಞಾಪೂರ್ವಕ ವರ್ತನೆ, ಸುಖ-ದುಖಃಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ, ಗುರು-ಹಿರಿಯರನ್ನು ಗೌರವಿಸುವ, ಪರಸ್ಪರ ಪ್ರೀತಿ,ಸ್ನೇಹ,ಸಹಬಾಳ್ವೆಯಿಂದ ಜೀವನ ಸಾಗಿಸುವ, ಸಕಾರಾತ್ಮಕವಾದ ಚಿಂತನೆ, ಸಮಾಜ ಸೇವೆ, ಸೃಜನಶೀಲತೆ, ಸಮತೋಲನವಾದ ಆಹಾರ, ವ್ಯಾಯಾಮ,ಯೋಗ,ಧ್ಯಾನ,ಪ್ರಾರ್ಥನೆ, ಹೊಂದಾಣಿಕೆ ಸ್ವಭಾವ, ವಾಸ್ತವವಾದಿಯಾಗಿರುವದು, ನೈತಿಕ ಮೌಲ್ಯಗಳ ಅಳವಡಿಕೆ, ಟೆನ್ಷನ ಮುಕ್ತ ಜೀವನ, ಸದಾ ಉತ್ಸಾಹ, ಉತ್ತಮ ನಡವಳಿಕೆ, ಆತ್ಮ ವಿಶ್ವಾಸ, ಕೀಳರಿಮೆಯನ್ನು ತ್ಯಜಿಸುವದು ಸೇರಿದಂತೆ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದರು.
ಸಂಸ್ಥೆಯ ಮುಖ್ಯಸ್ಥ ಬಸವರಾಜ ಮಳ್ಳಿ ಮಾತನಾಡಿ, ಉತ್ತಮ ವ್ಯಕ್ತಿತ್ವ, ವ್ಯಕ್ತಿಯನ್ನು ಶಕ್ತಿಯನ್ನಾಗಿಸುತ್ತದೆ. ಇಂತಹ ವ್ಯಕ್ತಿಗಳು ಸಮಾಜದ ಬಹು ದೊಡ್ಡ ಆಸ್ತಿಯಾಗಿದ್ದಾರೆ. ವಿದ್ಯಾರ್ಥಿಗಳು ಬಾಲ್ಯದಿಂದಲೇ ಶ್ರೇಷ್ಟ ವ್ಯಕ್ತಿಗಳ ಸಾಧನೆಯ ಬಗ್ಗೆ ತಿಳಿದುಕೊಂಡು, ತಮ್ಮ ಜೀವನದಲ್ಲಿ ಅವರ ತತ್ವಗಳನ್ನು ಅಳವಡಿಸಿಕೊಂಡರೆ ನೀವು ಕೂಡಾ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯವಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರದ ಅಧ್ಯಕ್ಷ ಅಸ್ಲಾಂ ಶೇಖ್, ಸೆಂಟರ್‍ನ ಶಿಕ್ಷಕರಾದ ಭಾಗ್ಯಶ್ರೀ ಕಲ್ಲೂರ್, ವಿಜಯಲಕ್ಷ್ಮೀ ನಾಲವಾರ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.