ವಿಧಾನ ಪರಿಷತ್‍ನಲ್ಲಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ: ಎಂ.ಸಿ. ಮುಲ್ಲಾ
ವಿಜಯಪುರ,ಮೇ.26: ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಜೂನ್‍ನಲ್ಲಿ ಚುನಾವಣೆ ನಡೆಯಲಿದ್ದು, ವಿಜಯಪುರ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಎಂ.ಸಿ. ಮುಲ್ಲಾ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂರು ಕಾಂಗ್ರೆಸ್ ಪಕ್ಷದ ಒಂದು ರೀತಿ ಆಕಿಜನ್ ಇದ್ದಂತೆ. ಹೀಗಾಗಿ ವಿಜಯಪುರದ ಮುಸ್ಲಿಂ ಸಮುದಾಯಕ್ಕೆ ಸೇರಿದ ನಾಯಕರಿಗೆ ವಿಧಾನ ಪರಿಷತ್‍ಗೆ ಆಯ್ಕೆ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯ ಸದಾ ಬೆನ್ನೆಲುಬು ಆಗಿದೆ. ಆದರೆ ವಿಜಯಪುರದಲ್ಲಿ ಮುಸ್ಲಿಮರಿಗೆ ಯಾವ ಅಧಿಕಾರವೂ ಇಲ್ಲ. ಅದೇ ತೆರನಾಗಿ ವಿಧಾನ ಪರಿಷತ್‍ನಲ್ಲಿ ವಿಜಯಪುರ ಜಿಲ್ಲೆಯ ಅಲ್ಪಸಂಖ್ಯಾತ ಅದರಲ್ಲೂ ಮುಸ್ಲಿಂರಿಗೆ ದೊರಕಿಲ್ಲ. ಎಲ್ಲ ಸಮುದಾಯಗಳಿಗೂ ಜನಪ್ರತಿನಿಧಿಗಳಿದ್ದಾರೆ. ಆದರೆ ಶಾಸನಸಭೆಯಲ್ಲಿ ವಿಜಯಪುರದ ಯಾವೊಬ್ಬ ಮುಸ್ಲಿಂರು ಇಲ್ಲ. ಹೀಗಾಗಿ ಈ ಒಂದು ಅವಕಾಶ ನೀಡಬೇಕು ಎಂದರು.
ಎಲ್ಲ ಸಮುದಾಯಗಳಿಗೂ ಕಾಂಗ್ರೆಸ್ ಪಕ್ಷ ನ್ಯಾಯ ಒದಗಿಸಿದೆ. ಆದರೆ ಅವಕಾಶ ವಂಚಿತವಾಗಿರುವ ಮುಸ್ಲಿಂ ಸಮಾಜಕ್ಕೆ ಈ ಅವಕಾಶ ನೀಡಿದರೆ ಮುಸ್ಲಿಂ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದಲ್ಲಿ ಅನೇಕ ಸಮರ್ಥ ನಾಯಕರಿದ್ದಾರೆ. ಹೀಗಾಗಿ ಅವರಲ್ಲಿ ಒಬ್ಬರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಮೀರ್ ಭಕ್ಷಿ, ಕಾಂಗ್ರೆಸ್ ಮುಖಂಡರಾದ ಶಬ್ಬೀರ್ ಜಹಾಗೀರದಾರ, ಅಕ್ರಂ ಮಾಶ್ಯಾಳಕರ, ಫಯಾಜ್ ಕಲಾದಗಿ, ದಸ್ತಗೀರ ಸಾಲೋಟಗಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.