ಶರಣ ಲೋಕಕ್ಕೆ ಅಕ್ಕ ಅನ್ನಪೂರ್ಣತಾಯಿ ಕೊಡುಗೆ ದೊಡ್ಡದು
ಬೀದರ್: ಮೇ.26:ಶರಣ ಲೋಕಕ್ಕೆ ಲಿಂಗಾಯತ ಮಹಾ ಮಠದ ಅಕ್ಕ ಅನ್ನಪೂರ್ಣತಾಯಿ ಅವರ ಕೊಡುಗೆ ಬಹು ದೊಡ್ಡದಾಗಿದೆ ಎಂದು ಶರಣ ಸಾಹಿತಿ ರಮೇಶ ಮಠಪತಿ ಹೇಳಿದರು.
ಅಕ್ಕ ಅನ್ನಪೂರ್ಣತಾಯಿ ಅವರಿಗೆ ನೈಟಿಂಗೇಲ್ ಪಬ್ಲಿಕ್ ಶಾಲೆಗಳ ಸಮೂಹದ ವತಿಯಿಂದ ನಗರದ ಏರಪೆÇೀರ್ಟ್ ರಸ್ತೆಯಲ್ಲಿ ಇರುವ ಸಮೂಹದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಕ್ಕ ಅನ್ನಪೂರ್ಣತಾಯಿ ಅವರು 12ನೇ ಶತಮಾನದ ಅಕ್ಕ ಮಹಾದೇವಿ ಅವರಂತೆ ತಂದೆ-ತಾಯಿ, ಮನೆ, ಮಠಗಳನ್ನು ಬಿಟ್ಟು ಬಸವ ತತ್ವಕ್ಕೆ ಸಮರ್ಪಿಸಿಕೊಂಡಿದ್ದರು ಎಂದರು.
ಅಪೂರ್ವ ವಾಗ್ಮಿಯಾಗಿದ್ದ ಅವರು ನಾಡಿನೆಲ್ಲೆಡೆ ಪ್ರವಚನ ಮಾಡಿ, ಜನರಲ್ಲಿ ವಚನಗಳಲ್ಲಿಯ ನೈತಿಕ ಮೌಲ್ಯಗಳನ್ನು ಬಿತ್ತಿದ್ದರು. ದೇಶದ ವಿವಿಧ ಭಾಗ, ವಿದೇಶದಲ್ಲೂ ಪ್ರವಚನಗೈದಿದ್ದರು. ಶರಣ ಲೋಕದ ಬೆಳ್ಳಿಚುಕ್ಕೆ ಎನಿಸಿದ್ದರು ಎಂದು ತಿಳಿಸಿದರು.
ಎಲ್ಲ ವರ್ಗದ ಕೇಳುಗರಿಗೆ ಮನಮುಟ್ಟುವಂತೆ ಪ್ರವಚನ ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದರು. ಕಲ್ಯಾಣ ಕರ್ನಾಟಕದ ಹೆಮ್ಮೆಯ ಪ್ರವಚನಕಾರರು, ಸಾಹಿತಿಯೂ ಆಗಿದ್ದ ಅಕ್ಕ ಅವರು ಲಿಂಗೈಕ್ಯರಾಗಿದ್ದರಿಂದ ಶರಣ ಸಂಕುಲ ಬಡವಾಗಿದೆ ಎಂದು ಭಾವುಕರಾಗಿ ನುಡಿದರು.
ಅಧ್ಯಕ್ಷತೆ ವಹಿಸಿದ್ದ ಚಿಂತಕ ಮಾಣಿಕಪ್ಪ ಗೋರನಾಳೆ ಮಾತನಾಡಿ, ಅಕ್ಕನವರು ಪ್ರತಿ ವರ್ಷ ಬೇಸಿಗೆಯಲ್ಲಿ ಬಸವ ಭಾರತಿ ಸಂಸ್ಕಾರ ಶಿಬಿರಗಳನ್ನು ಆಯೋಜಿಸಿ, ಮಕ್ಕಳಲ್ಲಿ ಸಂಸ್ಕಾರ ತುಂಬುತ್ತಿದ್ದರು ಎಂದು ಕೃತಜ್ಞತೆಯಿಂದ ಸ್ಮರಿಸಿದರು.
ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ದೇವಿದಾಸ ಭಾಲ್ಕಿಕರ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಮುಖರಾದ ಸಿ.ಎಸ್. ಗಣಾಚಾರಿ, ಬಸವರಾಜ ಶೇರಿಕಾರ್, ಮಲ್ಲಿಕಾರ್ಜುನ ಕರಂಜೆ ಅತಿಥಿಯಾಗಿದ್ದರು.
ಇದಕ್ಕೂ ಮುನ್ನ ಅಕ್ಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಒಂದು ನಿಮಿಷ ಮೌನ ಆಚರಿಸಿ, ಗೌರವ ಸಲ್ಲಿಸಲಾಯಿತು. ಸಭೆಯಲ್ಲಿ ಭಾಗವಹಿಸಿದ್ದ ನೂರಾರು ಶಿಕ್ಷಕರು ಅಕ್ಕನವರನ್ನು ನೆನೆದು ಕಣ್ಣೀರಾದರು.