ವಿಷ್ಣುವರ್ಧನ್‍ರವರ ಆದರ್ಶಗಳನ್ನು ಯುವಕರು ಪಾಲಿಸಬೇಕು
ಸಂಜೆವಾಣಿ ನ್ಯೂಸ್
ಮೈಸೂರು: ಸೆ.24:– ಖ್ಯಾತ ನಟ ವಿಷ್ಣುವರ್ಧನ್ ಅವರ ಆದರ್ಶಗಳನ್ನು ಯುವಕರು ಪಾಲಿಸಬೇಕು ಎಂದು ಡಾ.ವಿಷ್ಣು ಸೇನಾ ಸಮಿತಿ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಕರೆ ನೀಡಿದರು.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹೂಟಗಳ್ಳಿಯ ಶ್ರೀ ಅನಂತೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರಿನ ನಿಸರ್ಗ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಪುರಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಖ್ಯಾತ ನಟ ಡಾ. ವಿಷ್ಣುವರ್ಧನ್ ಅವರ 74ನೇ ಜನ್ಮದಿನದಲ್ಲಿ ವಿಶೇಷ ಆಹ್ವಾನಿತರಾಗಿ ಅವರು ಮಾತನಾಡಿ, ವಿಷ್ಣುವರ್ಧನ್ ಅವರು ಆದರ್ಶ ವ್ಯಕ್ತಿಯಾಗಿದ್ದರು. ಸಮಗ್ರ ಶಕ್ತಿಯಾಗಿದ್ದರು. ಕನ್ನಡದ ಅಸ್ಮಿತೆಯಾಗಿದ್ದರು ಎಂದು ಬಣ್ಣಿಸಿದರು.
ನಾನು ವ್ಯಕ್ತಿಪೂಜೆಯ ಆರಾಧಕನಲ್ಲ. ವಿಷ್ಣುವರ್ಧನ್ ಅವರನ್ನು ವ್ಯಕ್ತಿಯಾಗಿ ಆರಾಧಿಸುತ್ತಿಲ್ಲ. ಬದಲಿಗೆ ಅವರ ಆದರ್ಶಗಳಿಗಾಗಿ ಆರಾಧಿಸುತ್ತಿದ್ದೇನೆ. ವಿಷ್ಣುವರ್ಧನ್ ಅವರು ಎಲ್ಲಿಯೂ ಹೋಗಿಲ್ಲ. ನಮ್ಮ ನಡುವೆಯೇ ಇದ್ದಾರೆ. ನಾವಿರುವವರೆಗೆ ಮಾತ್ರವಲ್ಲ, ಮುಂದೆಯೂ ಇರುತ್ತಾರೆ ಎಂದರು.
ಈಗ ಪ್ಯಾನ್ ಇಂಡಿಯಾ ಯುಗ. ಆದರೆ ನಾಲ್ಕು ದಶಕಗಳ ಹಿಂದೆ ಇದ್ಯಾವುದು ಇಲ್ಲದಿದ್ದಾಗ ಕನ್ನಡದ ಪ್ರಜ್ಞೆಯನ್ನು ಇಡೀ ದೇಶಕ್ಕೆ ಪಸರಿಸಿದವರು ವಿಷ್ಣುವರ್ಧನ್ . ಹೆಣ್ಣು ಮಕ್ಕಳ ಬಗ್ಗೆ ಅಪಾರ ಗೌರವಭಾವ ಹೊಂದಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರು. ಮನೆಯಲ್ಲಿ ಪತ್ನಿಯನ್ನು ಬಹುವಚನದಿಂದ ಮಾತನಾಡಿಸುತ್ತಿದ್ದರು. ಸಿನಿಮಾ ಶೂಟಿಂಗ್ ವೇಳೆ ನಾಯಕಿಯರಿಗೆ ಅಪಾರ ಗೌರವ ನೀಡುತ್ತಿದ್ದರು ಎಂದು ಅವರು ಸ್ಮರಿಸಿದರು.
ವಿಷ್ಣುವರ್ಧನ್ ಅವರು ಕನ್ನಡ ನಾಡು-ನುಡಿ- ನೆಲ- ಜಲದ ವಿಷಯ ಬಂದಾಗ ಸ್ಪಂದಿಸುತ್ತಿದ್ದರು. ಸುಮ್ಮನೆ ಹೋರಾಟಕ್ಕೆ ಇಳಿಯುತ್ತಿರಲಿಲ್ಲ. ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡುತ್ತಿದ್ದರು ಎಂಬುದಕ್ಕೆ 800 ಪುಟಗಳನ್ನು ಓದಿದ ನಂತರ ಕಾವೇರಿ ಹೋರಾಟಕ್ಕೆ ಧುಮುಕಿದ್ದರು ಎಂದರು.
ವಿಷ್ಣುವರ್ಧನ್ ಅವರ ಆದರ್ಶದ ಬದುಕು, ಸಂಯಮ ಎಲ್ಲರಿಗೂ ಮಾದರಿಯಾಗಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಡಾ.ರಾಜ್‍ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರು ಕನ್ನಡ ಚಲನಚಿತ್ರ ರಂಗದ ಎರಡು ಕಣ್ಣುಗಳು. ಅವರು ಹಾಕಿಕೊಟ್ಟ ಹೋಗಿರುವ ಮಾರ್ಗದಲ್ಲಿ ಸಾಗಿದರೆ ಜನ ಕೂಡ ಅನುಸರಿಸುತ್ತಾರೆ ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮೈಸೂರಿನವರೇ ಆದ ವಿಷ್ಣುವರ್ಧನ್ ಅವರ ಹೆಚ್ಚಿನ ಚಿತ್ರಗಳ ಚಿತ್ರೀಕರಣ ಇಲ್ಲಿಯೇ ನಡೆಯುತ್ತಿತ್ತು. ಮೈಸೂರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು ಎಂದು ಸ್ಮರಿಸಿದರು.
ನಿಸರ್ಗ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ನಾಗರಾಜ್ ಮಾತನಾಡಿ, ಯಾರೂ ಕೂಡ ವಯಸ್ಸಾದ ತಂದೆ- ತಾಯಿಯನ್ನು ದೂರ ಮಾಡಬೇಡಿ. ಚೆನ್ನಾಗಿ ನೋಡಿಕೊಳ್ಳಿ. ಅದೇ ರೀತಿ ನಿರಾಶ್ರಿತರು ಯಾರಾದರೂ ಇದ್ದಲ್ಲಿ ಅವರಿಗೆ ಸಹಾಯ ಮಾಡಿ. ತಂದೆ- ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆ ಹೆಣ್ಣು ಮಕ್ಕಳಾದವರು ಅತ್ತೆ- ಮಾವರನ್ನು ನೋಡಿಕೊಂಡರೆ ವೃದ್ಧಾಶ್ರಮಗಳ ಅವಶ್ಯಕತೆಯೇ ಬರುವುದಿಲ್ಲ ಎಂದರು.
ಗುಂಡ್ಲುಪೇಟೆ ತಾ.ಕುರುಬರಹುಂಡಿಯ ಶ್ರೀ ಇಮ್ಮಡಿ ಮಹಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಅನಂತೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ನಾಗರಾಜ ವಿ. ಭೈರಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಗಾಯಕ ಶಶಿಧರ ಕೋಟೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾ. ಗಂಗಾಧರಪ್ಪ, ಚಿನ್ನಬೆಳ್ಳಿ ಕೆಲಸಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಟಿ. ಸುರೇಶ್ ಗೋಲ್ಡ್, ಸಾಹಿ ಧಾಮ್ ಫೌಂಡೇಷನ್ ಅಧ್ಯಕ್ಷ ಸುಜಯ್ ಜಾದವ್, ಜಿಪಂ ಮಾಜಿ ಸದಸ್ಯ ಮಣಿಶೇಖರ್, ಕೇಂದ್ರ ಕಿಸಾನ್ ಸಮಿತಿ ನಿರ್ದೇಶಕ ಆರ್.ಎಸ್. ರಾಜು, ಬೆಂಗಳೂರು ದಕ್ಷಿಣ ಕನ್ನಡ ಜಾನಪದ ಪರಿಷತ್ ಅಧ್ಯಙಕ್ಷ ಜಿ.ಎಂ. ಚಂದ್ರಶೇಖರಯ್ಯ, ತಾವರಕೆರೆ ಸಾಯಿ ದೃಷ್ಟಿ ಓಲ್ಡ್ ಏಜ್ ಹೋಮ್‍ನ ಎಸ್.ಕೆ. ರಾಮಸ್ವಾಮಿ, ಸಮಾಜ ಸೇವಕರಾದ ಡಿ. ರಾಮಯ್ಯ, ನಂಬಿರಾಜ್, ನಿಸರ್ಗ ಚಾರಿಟಬಲ್ ಟ್ರಸ್ಟಿನ ಉಪಾಧ್ಯಕ್ಷೆ ಶಾಂತಾ ನಾಗರಾಜ್, ಮಹೇಂದ್ರ ಮಣೋತ್, ಇಂದು ಶೇಕರ್, ರಾಜ್ ಮೊದಲಾದವರು ಇದ್ದರು.
ದೂದಾಳೆ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಶಿವಶಂಕರರಾವ್ ದೂದಾಳೆ ಸ್ವಾಗತಿಸಿದರು. ಜೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತರಾದ ಕಾರ್ಯಕ್ರಮ ಆಯೋಜಕ ಅಪೇಕ್ಷ ಮಂಜುನಾಥ್ ನಿರೂಪಿಸಿದರು.
ರಸಮಂಜರಿ ಕಾರ್ಯಕ್ರಮ: ಅಪೇಕ್ಷ ನೃತ್ಯ ಕಲಾವೃಂದದ ಸ್ಥಾಪಕ ಜೂನಿಯರ್ ವಿಷ್ಣುವರ್ಧನ್ ಮತ್ತು ತಂಡ, ಎನ್. ಬೆಟ್ಟೇಗೌಡರ ನೇತೃತ್ವದಲ್ಲಿ ಗಾನನಂದನ ತಂಡದಿಂದ ವಿಷ್ಣುವರ್ಧನ್ ನಟಿಸಿರುವ ಚಲನಚಿತ್ರಗಳ ಗೀತೆಗಳ ಗಾಯನ ನಡೆಯಿತು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಲತಾ ಮನೋಹರ್, ವಾಣಿ, ಗೀತಾಲಕ್ಷ್ಮಿ, ನಾಗವೇಣಿ, ನಾಗರತ್ನ, ಪ್ರತಿಭಾ, ಲತಾ, ಸುಜಾತ, ಅಬ್ದುಲ್ ಕಯ್ಯೂಮ್ ಗೀತೆಗಳನ್ನು ಹಾಡಿದರು.
ಪ್ರಶಸ್ತಿಗಳ ಪ್ರದಾನ: ವಿವಿಧ ಕ್ಷೇತ್ರಗಳ ಸಾಧಕರಿಗೆ ಮೈಸೂರು ರತ್ನ ಡಾ.ವಿಷ್ಣುವರ್ಧನ್ ರಾಜ್ಯ ಪ್ರಶಸ್ತಿ, ವೈದ್ಯರತ್ನ, ಸಮಾಜ ಸೇವಾ ರತ್ನ. ಹೃದಯವಂತ ಡಾ.ವಿಷ್ಣುವರ್ಧನ್ ಪ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಅಯೋಧ್ಯೆಯ ಬಾಲರಾಮನ ವಿಗ್ರಹದ ಶಿಲ್ಪಿ ಅರುಣ್ ಯೋಗಿರಾಜ್ ಅವರ ಪರವಾಗಿ ಮಾತೃಶ್ರೀಯವರನ್ನು ಸನ್ಮಾನಿಸಲಾಯಿತು.
74 ಕೆಜಿ ಕೇಕ್: ವಿಷ್ಣುವರ್ಧನ್ ಅವರ 74ನೇ ಜನ್ಮದಿನದ ಅಂಗವಾಗಿ 74 ಕೆಜಿಯ ಬೃಹತ್ ಕೇಕನ್ನು ಕತ್ತರಿಸಿಲಾಯಿತು. ಅಭಿಮಾನಿಗಳಿಂದ ಆಗಾಗ ವಿಷ್ಣುವರ್ಧನ್ ಪರವಾದ ಘೋಷಣೆಗಳು ಮೊಳಗುತ್ತಿದ್ದವು.