35 ವರ್ಷಗಳ ನಂತರ ಸ್ನೇಹಿತರ ಪುನರ್ಮಿಲನ. ನೆನಪಿನ ಬುತ್ತಿ ಬಿಚ್ಚಿದ ಗೆಳೆಯರ ಬಳಗ
.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ.26 :- ಅಂದು ಪಿಯುಸಿ ಓದಿದ ಬಾಲ್ಯದ ಗೆಳೆತನದ ಸ್ನೇಹಿತರ ಬಳಗವು  35 ವರ್ಷಗಳ ನಂತರ ಒಟ್ಟಿಗೆ ಸೇರುವ ಪುನರ್ಮಿಲನದ  ಮೂಲಕ ತಾವು ಮಾಡಿದ ಕಪಿಚೇಷ್ಟೆಯಿಂದ ಹಿಡಿದು ಅನೇಕ ಸಿಹಿ ಕಹಿ ಘಟನೆಗಳ ನೆನಪಿನ ಬುತ್ತಿ ಬಿಚ್ಚಿಕೊಂಡು ಸಂಭ್ರಮಿಸಿದ ಅಪರೂಪದ ವೇದಿಕೆಗೆ ಕೂಡ್ಲಿಗಿ ಸರ್ಕಾರಿ ಜೂನಿಯರ ಕಾಲೇಜಿನ ಆವರಣ ಶನಿವಾರ  ಸಾಕ್ಷಿಯಾಗಿತ್ತು.
1985ರಿಂದ 1988 ರವರೆಗೆ ಕೂಡ್ಲಿಗಿ ಸರ್ಕಾರಿ ಜೂನಿಯರ ಕಾಲೇಜಿನಲ್ಲಿ ಪಿಯುಸಿ ಓದಿದವರು  ಈಗ ಕೆಲವರು ನೌಕರರಾಗಿದ್ದರೆ, ಇನ್ನೂ ಕೆಲವರು ವ್ಯಾಪಾರಸ್ಥರು, ಗೃಹಿಣಿಯರು, ರೈತರಾಗಿದ್ದಾರೆ. ಅವರೆಲ್ಲಾ ಸೇರಿ ತಮ್ಮ ಬಾಲ್ಯದ ನೆನಪನ್ನು ಮರುಕಳಿಸಲು ಒಂದೆಡೆ ಸೇರುವ ವೇದಿಕೆ ಶನಿವಾರ ತಯಾರು ಮಾಡಲಾಗಿತ್ತು . ಆ ಸಾಲಿನಲ್ಲಿ ಪಿಯುಸಿ ಓದಿದ್ದ ಡಾ.ಟಿ.ಕೊತ್ಲಮ್ಮ ಅವರೀಗ ಇದೇ ಸರ್ಕಾರಿ ಕಾಲೇಜಿನ   ಪ್ರಾಚಾರ್ಯರಾಗಿದ್ದಾರೆ. ಅವರು ಈ ಗೆಳೆಯರ ಬಳಗದಲ್ಲಿ ಭಾಗವಹಿಸಿ ಮಾತನಾಡಿ, ಕಳೆದ 35 ವರ್ಷಗಳ ಹಿಂದೆ ನಾವು ಪಿ.ಯು.ಸಿ ಓದುತ್ತಿದ್ದಾಗ ನಮ್ಮ ಉಪನ್ಯಾಸಕರೆಂದರೆ ಎಲ್ಲರಿಗೂ ಭಯ ಇರುತ್ತಿತ್ತು. ಪ್ರತಿಯೊಬ್ಬ ಶಿಕ್ಷಕರು, ಉಪನ್ಯಾಸಕರಿಂದ ಕಲಿತ ಶಿಕ್ಷಣವೇ ನಮ್ಮ ದಾರಿಗೆ ಉಜ್ವಲದ  ಬೆಳಕಾಗಿರುವುದು ಎಂದು ಸ್ಮರಿಸಿದರಲ್ಲದೆ, ಗೆಳೆಯರೆಲ್ಲರೂ ಸೇರಿದ್ದು ಸಂತೋಷವಾಗಿದೆ ಎಂದು ತಿಳಿಸಿದರು.
ಹೊಸಪೇಟೆಯ ಸರ್ಕಾರಿ ಜೂನಿಯರ  ಕಾಲೇಜಿನ ಪ್ರಾಚಾರ್ಯರು ಹಾಗೂ ಪ್ರಾಚಾರ್ಯರ ಸಂಘದ ಜಿಲ್ಲಾ ಅಧ್ಯಕ್ಷರಾಗಿರುವ ಕೂಡ್ಲಿಗಿ ಮೂಲದ  ನಾಗರಾಜ ಹವಾಲ್ದಾರ್ ಮಾತನಾಡಿ, ನಾವು ಕಾಲೇಜಿನಲ್ಲಿ ಓದುತ್ತಿರುವಾಗ ಈಗಿರುವಷ್ಟು ಸೌಕರ್ಯಗಳು ಅಂದು ಇರಲಿಲ್ಲ. ಆದರೂ, ಉಪನ್ಯಾಸಕರು ಎಲ್ಲಾ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕೆಂಬ ಹಂಬಲದಲ್ಲಿ  ಶಿಕ್ಷಣ ಕಲಿಸಿದ್ದನ್ನು ನಾವ್ಯಾರೂ ಇಂದಿಗೂ ಮರೆಯುವಂತಿಲ್ಲ ಎಂದು ನೆನಪನ್ನು ಮೆಲುಕು ಹಾಕಿದರು. ಇದೇ ಸಂದರ್ಭದಲ್ಲಿ ಗೆಳೆಯರ ಬಳಗ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯರಾದ ಡಾ.ಟಿ.ಕೊತ್ಲಮ್ಮ, ನಾಗರಾಜ ಹವಾಲ್ದಾರ್, ಕೂಡ್ಲಿಗಿ ಸರ್ಕಾರಿ ಜೂನಿಯರ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಉದಯಜನ್ನು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರಾದ ಮಲ್ಲಿಕಾರ್ಜುನ, ಸಿ.ವೆಂಕಟೇಶ್, ಪುರಷೋತ್ತಮ, ಪಂಕಜಾ, ನಿಂಗಮ್ಮ, ಚಂದ್ರಕಲಾ, ಶರಣಪ್ಪ, ಕೊಡದೀರಪ್ಪ, ನಿರ್ಮಲಾ, ಆನಂದ, ಷಣ್ಮುಖನಗೌಡ, ಈಶ್ವರಪ್ಪ, ಪ್ರಹ್ಲಾದ, ತಾಯಕನಹಳ್ಳಿ ನಾಗರಾಜ ಸೇರಿ ಇತರರಿದ್ದರು.