ಮೂರು ವರ್ಷಗಳಿಂದ ಬೆಲೆ ಕುಸಿತ ಕಂಗಾಲಾದ ದ್ರಾಕ್ಷಿ ಬೆಳೆಗಾರರಿಗೆ ಬೇಕಿದೆ ಸಹಾಯ ಹಸ್ತ
ಆಳಂದ:ಮೇ.26: ಕಳೆದ ಮೂರು ವರ್ಷಗಳಿಂದ ದ್ರಾಕ್ಷಿ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದೇ ನಷ್ಟ ಅನುಭವಿಸಿ ಕಂಗಾಲಾಗಿದ್ದಾರೆ.
ಬೆಳೆಗೆ ದುಬಾರಿ ಬೆಲೆಯ ಕ್ರಿಮಿನಾಷಕ ಔಷಧಿ ಸಿಂಪರಣೆ ಮತ್ತು ಗೊಬ್ಬರದ ಬೆಲೆ ಹೆಚ್ಚಳ. ಕಾರ್ಮಿಕರ ದುಬಾರಿ ಕೂಲಿ ನಡುವೆ ಕಷ್ಟಪಟ್ಟು ಬೆಳೆದ ದ್ರಾಕ್ಷಿ ಹಾಗೂ ಕೆಲವರು ಮನುಕಿ ತಯಾರಿಸಿ ಮಾರುಕಟ್ಟೆಗೆ ಸಾಗಿದರೆ ಅಲ್ಲಿಯೂ ಸಹ ಸೂಕ್ತ ಬೆಲೆ ಕೈ ಸೇರದೆ ಸತತ ನಷ್ಟವನ್ನು ಅನುಭವಿಸುವಂತಾಗಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.
ಕೆಲವೊಮ್ಮೆ ನಿರೀಕ್ಷಿತ ಇಳುವರಿ ಬಂದರು ಅಥವಾ ಬಾರದಿದ್ದರು ಸೂಕ್ತ ಬೆಲೆ ಕೈಸೇರದೆ ನಷ್ಟದಲ್ಲಿ ವರ್ಷ ಕಳೆಯುವಂತ ಪರಿಸ್ಥಿತಿ ಇದೆ.
ದ್ರಾಕ್ಷಿ ನಾಟಿಗೆ ಖರ್ಚು: ಒಮ್ಮೆ ದ್ರಾಕ್ಷಿ ಬೆಳೆ ನಾಟಿ ಮಾಡಲು ಎಕರೆ 4ರಿಂದ 5ಲಕ್ಷ ರೂಪಾಯಿ ಖರ್ಚು ತಗಲುತ್ತದೆ. ಸುಮಾರು 15 ವರ್ಷದ ಬಹುವಾರ್ಷಿಕ ಬೆಳೆ ಇದಾಗಿದ್ದು, ಪ್ರತಿವರ್ಷ ನಿರ್ವಾಹಣೆ ಮೂಲಕ ಬೆಳೆ ಉತ್ಪಾದನೆ ಮಾಡಬಹುದಾಗಿದೆ.
ಒಂದು ಎಕರೆ ದ್ರಾಕ್ಷಿ ಬೆಳೆಗೆ 2ನೇ ವರ್ಷದಿಂದ ಮುಂದಿನ ಪ್ರತಿವರ್ಷ 2.50ಲಕ್ಷ ರೂಪಾಯಿ ಖರ್ಚಾಗುತ್ತದೆ. ಎಕರೆ 3 ಟನ್ (30 ಕ್ವಿಂಟಲ್) ಇಳುವರಿ ಬಂದರೆ 2.50 ಲಕ್ಷ ರೂಪಾಯಿ ಹಣ ಕೈಸೇರಿದರೆ ಮಾಡಿದ ಖರ್ಚಿಗೆ ಸರಿದ್ಯೋಗಿ ನಮಗೇ ಉಳಿತಾಯದ ಬದಲು ನಷ್ಟವಾಗುತ್ತಿದೆ ಎಂದು ಬೆಳೆಗಾರ ಮಂಜುನಾಥ ಎಸ್. ಬುಕ್ಕೆ ಹೇಳಿಕೊಂಡಿದ್ದಾರೆ.
40 ಎಕರೆ ಮನುಕಿ ರೈತರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿಶೇಷವಾಗಿ ಗುಣಮಟ್ಟದ ಮನುಕಿ (ಕಿಸ್ಮಿಸ್), 40 ಎಕರೆಯಲ್ಲಿ ಉತ್ಪಾಸಲಾಗುತ್ತಿದೆ. ತಾಲೂಕಿನ ಹಳ್ಳಿಸಲಗರ ಗ್ರಾಮದ ಸುಲ್ತಾನಪ್ಪ ವಾಗ್ದಾರಿ (4 ಎಕರೆ), ನಾಗರಾಜ ಚಿಂಚನಸೂರ (3), ಕೊಡಲಹಂಗರಗಾ ಲಕ್ಷ್ಮೀಕಾಂತ ಉದನೂರ (2), ಪಡಸಾವಳಿ ಗ್ರಾಮದ ದಸ್ತಗೀರ (2), ಆಳಂದ ರೈತ ಜಯಕುಮಾರ ವರನಾಳೆ (4), ಜಮಾಲ ಮಕಾಂದರ್ (4), ಮಂಜುನಾಥ ಎಸ್. ಬುಕ್ಕೆ (2), ಬಸವರಾಜ ಶೇರಖಾನೆ (2), ಖಜೂರಿ ಗ್ರಾಮದ ಖಂಡಾಳಕರ್ (4), ಕೇರೂರ ಸಿದ್ಧರಾಮ ಮೂಲಗೆ (2), ನೆಲ್ಲೂರ ಗ್ರಾಮದ ಶುಶಿಲಕುಮಾರ ಪಾಟೀಲ (2), ನಿಂಬಾಳದ ಗುರುಶಾಂತಪ್ಪ ಪಾಟೀಲ (6), ಎಕರೆ ದ್ರಾಕ್ಷಿ ಫಲವನ್ನು ಮಾರ್ಪಡಿಸಿ ಮನುಕಿ ಉತ್ಪಾದನೆ ಕೈಗೊಳ್ಳುತ್ತಾರೆ.
ತಯಾರಾದ ಕಿಸಮಿಸ್ ಒಂದು ಕೆಜಿಗೆ ರೈತನಿಗೆ 100 ರೂಪಾಯಿ ಬೆಲೆ ಬರುತ್ತದೆ. ಆದರೆ ಅಂಗಡಿಗಳಲ್ಲಿ ಇದೇ ಒಂದು ಕೆಜಿಗೆ 200 ರೂಪಾಯಿ ಮಾರಾಟವಾಗುತ್ತದೆ. ಹೀಗಾಗಿ ದರ ಕೈಸೇರದ ಕಾರಣ ಖರ್ಚು ಹೆಚ್ಚುತ್ತಿದೆ. ದ್ರಾಕ್ಷಿ ಬೆಳೆ ಕೈಬಿಡುವ ನಿಧಾರಕ್ಕೆ ಬರತೊಡಗಿದ್ದಾರೆ.
ಪ್ರಮುಖ ಸಮಸ್ಯೆಗಳು:
ಮಾರುಕಟ್ಟೆಯಲ್ಲಿ ಮಿತಿಮೀರಿದ ಪೂರೈಕೆ: ದ್ರಾಕ್ಷಿ ಹಣ್ಣುಗಳ ಮಿತಿಮೀರಿದ ಉತ್ಪಾದನೆ ಮತ್ತು ಪೂರೈಕೆ, ಮಾರುಕಟ್ಟೆಯಲ್ಲಿ ಬೇಡಿಕೆಗೂ ಮೀರಿ ಉಂಟಾಗಿರುವುದರಿಂದ ಬೆಲೆಗಳು ತೀವ್ರವಾಗಿದೆ ಎಂಬುದು ವಿಶ್ಲೇಷಿಸಲಾಗಿದೆ.
ರಫ್ತು ತೊಂದರೆಗಳು: ದ್ರಾಕ್ಷಿ ಹಣ್ಣುಗಳ ರಫ್ತು ವ್ಯವಸ್ಥೆಯಲ್ಲಿ ಅನುಮಾನಗಳು ಮತ್ತು ಅಡಚಣೆಗಳ ಕಾರಣದಿಂದಾಗಿ, ಸ್ಥಳೀಯ ಮಾರುಕಟ್ಟೆಯಲ್ಲಿ ಹಣ್ಣುಗಳ ಪೂರೈಕೆ ಹೆಚ್ಚಾಗಿ ಬೆಲೆ ಕುಸಿತವಾಗುತ್ತಿದೆ.
ಹವಾಮಾನ ಸ್ಥಿತಿಗಳು: ಅಸಮರ್ಪಕ ಹವಾಮಾನ ಮತ್ತು ಅತಿವೃಷ್ಟಿಯಿಂದ ದ್ರಾಕ್ಷಿ ಬೆಳೆಗಳಿಗೆ ಹಾನಿಯಾಗಿರುವುದು, ಫಲಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಬೆಲೆ ಇಳಿಯುತ್ತದೆ. ಈ ನಡುವೆ ರೈತರು ಬೆಳೆ ಉಳಿಸಿಕೊಳ್ಳಲು ಸಾಕಷ್ಟು ಖರ್ಚುನ್ನು ವ್ಯಹಿಸಿ ಅವರ ಜೇಬಿಗೆ ಕತ್ತರಿ ಬೀಳತೊಡಗಿದೆ.
ಸಂಗ್ರಹಣಾ, ಸಂಸ್ಕರಣಾ ಸೌಲಭ್ಯಗಳ ಕೊರತೆ: ಉತ್ತಮ ಗುಣಮಟ್ಟದ ಕಿಸ್ಮಿಸ್ ತಯಾರಿಸಲು ಅಗತ್ಯವಿರುವ ಸೌಲಭ್ಯಗಳ ಕೊರತೆ, ಪರಿಣಾಮವಾಗಿ ಉತ್ಪನ್ನಗಳ ಮೌಲ್ಯ ಕಡಿಮೆಯಾಗುತ್ತದೆ.
ಮಾರಾಟದ ಸರಪಳಿಯಲ್ಲಿನ ಅಡಚಣೆಗಳು: ಮಧ್ಯವರ್ತಿಗಳ ಹಸ್ತಕ್ಷೇಪದಿಂದ ರೈತರು ತಕ್ಷಣದ ನಗದು ಅವಶ್ಯಕತೆಯಿಂದ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ಮಾರುಕಟ್ಟೆ ಮಾಹಿತಿ ಮತ್ತು ಪ್ರವೇಶದ ಅಭಾವ: ರೈತರಿಗೆ ಸೂಕ್ತ ಮಾರುಕಟ್ಟೆ ಮಾಹಿತಿ ಮತ್ತು ವಿವಿಧ ಮಾರುಕಟ್ಟೆಗಳಿಗೆ ಪ್ರವೇಶ ಇಲ್ಲದಿರುವುದರಿಂದ, ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ.
ಬೆಲೆ ಕುಸಿತ: ಮಾರುಕಟ್ಟೆಯಲ್ಲಿ ಹೆಚ್ಚಿನ ಪೂರೈಕೆ ಮತ್ತು ಕಡಿಮೆ ಬೇಡಿಕೆಯ ಕಾರಣ, ದ್ರಾಕ್ಷಿ ಬೆಳೆಗಳು ತಾತ್ಕಾಲಿಕವಾಗಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ ಇದರಿಂದಾಗಿ ರೈತರಿಗೆ ಮಾಡಿದ ಖರ್ಚು ವಾಪಸ ಬಾರದಂತಾಗಿದೆ.
ನೈಜ ಮೌಲ್ಯ ಕಳೆದುಕೊಳ್ಳುವುದು: ಸೂಕ್ತ ಸೌಲಭ್ಯಗಳಿಲ್ಲದಕ್ಕೆ ಸಂಗ್ರಹಣಾ ಮತ್ತು ಸಂಸ್ಕರಣಾ ಸೌಲಭ್ಯಗಳ ಕೊರತೆಯಿಂದ, ದ್ರಾಕ್ಷಿ ಬೆಳೆಗಳ ಗುಣಮಟ್ಟ ಹದಗೆಡುವ ಮತ್ತು ಮಾರಾಟದ ವೇಳೆಯಲ್ಲಿ ಕಡಿಮೆ ಮೌಲ್ಯ ಪಡೆಯುವಂತಾಗಿದೆ.
ಮಧ್ಯವರ್ತಿಗಳ ಬಾಧೆ: ಮಧ್ಯವರ್ತಿಗಳ ಹಸ್ತಕ್ಷೇಪದಿಂದಾಗಿ, ಬೆಳೆಗಾರರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಲಾಭದ ಒಂದು ದೊಡ್ಡ ಭಾಗ ಮಧ್ಯವರ್ತಿಗಳೇ ಪಡೆಯುತ್ತಾರೆ.
ಪರಿಹಾರ ಕ್ರಮಗಳು:
ಮಾರುಕಟ್ಟೆ ಮಾಹಿತಿ ಮತ್ತು ಸೌಲಭ್ಯಗಳ ಒದಗಿಕೆ**: ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳು ಮತ್ತು ಮಾರುಕಟ್ಟೆ ಮಾಹಿತಿ ಅಪ್ಲಿಕೇಶನ್‍ಗಳ ಮೂಲಕ ರೈತರಿಗೆ ಮಾಹಿತಿ ಒದಗಿಸುವುದು.
ಸಂಗ್ರಹಣಾ ಮತ್ತು ಸಂಸ್ಕರಣಾ ಸೌಲಭ್ಯಗಳ ಸುಧಾರಣೆ: ಉತ್ತಮ ಗುಣಮಟ್ಟದ ಕಿಸ್ಮಿಸ್ ತಯಾರಿಸಲು ಮತ್ತು ಸಂಗ್ರಹಿಸಲು ಸರ್ಕಾರ ಸೂಕ್ತ ಸೌಲಭ್ಯಗಳನ್ನು ಒದಗಿಸುವುದು.
ನೇರ ಮಾರಾಟ ಮತ್ತು ಇ-ಮಾರಾಟ: ರೈತರು ನೇರವಾಗಿ ಗ್ರಾಹಕರಿಗೆ ಅಥವಾ ಇ-ಮಾರಾಟದ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವ ವ್ಯವಸ್ಥೆಗೆ ಸರ್ಕಾರ ಮುಂದಾಗಬೇಕಾಗಿದೆ ಎಂದು ರೈತರ ಬೇಡಿಕೆಯಾಗಿದೆ.
ಸರ್ಕಾರದ ಬೆಂಬಲ: ದ್ರಾಕ್ಷಿ ಅಥವಾ ಮನುಕಿ ಬೆಳೆಗಾರರಿಗೆ ಸಾಲ ಮನ್ನಾ, ಬಡ್ಡಿ ರಿಯಾಯಿತಿ, ಮತ್ತು ತುರ್ತು ನೆರವು ಒದಗಿಸಲು ಸರ್ಕಾರದ ವತಿಯಿಂದ ವಿಶೇಷ ಯೋಜನೆಗಳು ರೂಪಿಸುವ ಜೊತೆಗೆ ಬೆಳೆಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶ ಒದಗಿಸಲು ಪ್ರಯತ್ನಿಸಬೇಕಾಗಿದೆ. ದ್ರಾಕ್ಷಿ ಬೆಳೆಗಾರರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಸಮರ್ಪಕ ಪರಿಹಾರ ಕ್ರಮಗಳ ಮೂಲಕ ಕಡಿಮೆ ಮಾಡಬಹುದು.
ಸರ್ಕಾರ, ಸಂಶೋಧನಾ ಸಂಸ್ಥೆಗಳು, ಮತ್ತು ಕೃಷಿ ಸಂಘಟನೆಗಳು ಸೇರಿ, ಬೆಳೆಗಾರರಿಗೆ ಬೆಂಬಲ ನೀಡಿದರೆ, ಅವರು ಉತ್ತಮ ಬೆಲೆ ಪಡೆಯುವ ಮತ್ತು ತನ್ನ ಶ್ರಮಕ್ಕೆ ತಕ್ಕ ನಿಜವಾದ ಮೌಲ್ಯ ಗಳಿಸುವ ಅವಕಾಶವನ್ನು ಹೊಂದಲು ಸಾಧ್ಯವಿದೆ ಎಂದು ಬೆಳೆಗಾರರು ಒತ್ತಾಯಿಸಿದ್ದಾರೆ.
ಸೂಕ್ತ ಬೆಲೆ ಸಿಕ್ಕರೆ ಸಾಕು ಸಹಾಯ ಸೌಲಭ್ಯ ಬೇಕಿಲ್ಲ:
ಕೇಂದ್ರ ಸರ್ಕಾರವು ದೇಶದ ರೈತರ ಬೆಳೆಯುವ ಮನುಕಿ ಬೆಳೆಯನ್ನು ವಿದೇಶಕ್ಕೆ ರಪ್ತುಗೊಳಿಸಬೇಕು. ಲಾಭ ಕೈ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಈ ರೀತಿ ಬೆಲೆ ಬಾರದೆ ನಷ್ಟವಾದರೆ ಪರ್ಯಾಯ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಬೆಳೆದ ದ್ರಾಕ್ಷಿಗೆ ಸೂಕ್ತ ಬೆಲೆ ಬಂದರೆ ಸಾಕು ಸರ್ಕಾರದ ಸಹಾಯಧನ ಸೌಲಭ್ಯಗಳು ಬೇಕಿಲ್ಲ. ಬೆಂಬಲ ಬೆಲೆ ಕೊಟ್ಟರೆ ಸಾಕು, 100ರೂಪಾಯಿ ಕೆಜಿಗೆ ಮಾರಾಟವಾಗುತ್ತಿದ್ದರಿಂದ ನಷ್ಟವಾಗುತ್ತಿದೆ. ರೈತರಿಗೆ ಆದಾಯ ತಂದುಕೊಡಲು 200 ರೂಪಾಯಿ ಕನಿಷ್ಟ ಬೆಂಬಲ ಬೆಲೆಯನ್ನಾದರು ಸರ್ಕಾರ ನೀಡಬೇಕು.
ಮಂಜುನಾಥ ಎಸ್. ಬುಕ್ಕೆ ಮನುಕಿ ಬೆಳೆ ರೈತ ಆಳಂದ.