ನಿರಂತರ ಮಳೆಗೆ ಹಲವು ಕೆರೆಗಳು ಭರ್ತಿಯಾಗಿದ್ದೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.26:- ಕಳೆದ 2 ವಾರಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಚಾಮರಾಜನಗರ ಜಿಲ್ಲೆಯ ಹಲವು ಕೆರೆಗಳು ಭರ್ತಿಯಾಗುತ್ತಿದ್ದು, ಇನ್ನೂ ಹಲವು ಕೆರೆಗಳು ನೀರಿಲ್ಲದೇ ಖಾಲಿ – ಖಾಲಿಯಾಗಿವೆ. ಉತ್ತಮ ಮಳೆ ಸುರಿದಿರುವ ಹಿನ್ನೆಲೆ ನಾಡಿನμÉ್ಟೀ ಅಲ್ಲದೇ ಕಾಡಿನ ಕೆರೆಗಳು ಕೂಡತುಂಬಿದ್ದು, ನೀರಿಗಾಗಿ ವನ್ಯಜೀವಿಗಳು ಪರದಾಡುವುದು ತಪ್ಪಿದೆ. ಬಂಡೀಪುರ, ಬಿಆರ್‍ಟಿ ಭಾಗದ ಅರಣ್ಯ ಪ್ರದೇಶ ಹಸಿರು ಹೊದ್ದಿಕೊಳ್ಳುತ್ತಿದ್ದು ಅರಣ್ಯಕ್ಕೀಗ ಜೀವ ಕಳೆ ಬಂದಿದೆ.
ತಾಲೂಕಿನ ದೊಡ್ಡರಾಯ ಪೇಟೆ ಕೆರೆ, ಉಮ್ಮತ್ತೂರು ಕೆರೆ, ಹುತ್ತೂರುಕೆರೆ, ಹನೂರು ತಾಲೂಕಿನ ಗೋಪಿನಾಥಂಕೆರೆ, ಕೌಲಿ ಹಳ್ಳಕೆರೆ ಭರ್ತಿಯಾಗುತ್ತಿದೆ. ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಕೆಂಪು ಸಾಗರಕೆರೆ, ಹೊನ್ನೇಗೌಡನ ಹಳ್ಳಿ ವಡ್ಡರಗಟ್ಟೆ ಕೆರೆ ಹಾಗೂ ಹಾಲಹಳ್ಳಿ ಅಣೆಕಟ್ಟೆ ತುಂಬಿ ಕೋಡಿ ಬಿದ್ದಿದೆ. ಜೊತೆಗೆ ಗುಂಡ್ಲುಪೇಟೆ ತಾಲೂಕಿನ ಹಲವು ಕೆರೆಗಳಿಗೆ ಶೇ.50ರಿಂದ 80 ಭಾಗ ನೀರು ಬಂದಿದ್ದು, ತುಂಬುವ ಹಂತಕ್ಕೆ ತಲುಪಿದೆ.
ಬರಗಿಕೆರೆ, ಮುಂಟೀಪುರ ಕೆರೆ, ದೇವರಹಳ್ಳಿ ಕೆರೆ, ಗೋಪಾಲಪುರ ಕೆರೆ, ಕನ್ನೇಗಾಲ ಕೆರೆ, ಕೂತನೂರುಕೆರೆ, ಹಂಗಳ ಹೀರಿಕೆರೆ, ಹಂಗಳ ದೊಡ್ಡಕೆರೆ, ಮಂಗಲ, ಎಲಚೆಟ್ಟಿ, ಜಕ್ಕಹಳ್ಳಿ, ಕಮರಹಳ್ಳಿ ಕೆರೆ, ದೇವಲಾಪುರಕೆರೆ, ಕುರುಬರ ಹುಂಡಿಕೆರೆ ಸೇರಿದಂತೆ ಇನ್ನಿತರ ಹಲವು ಕೆರೆಗಳಿಗೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇ.50ರಷ್ಟು ನೀರು ತುಂಬಿದೆ. ಜೊತೆಗೆ ಕಾಲುವೆಗಳ ಮೂಲಕ ನೀರು ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಿಗೆ ಹರಿದು ಬರುತ್ತಿದೆ. ವಡ್ಡಗೆರೆ ಕೆರೆಗೆ ಏತ ನೀರಾವರಿ ಯೋಜನೆ ಹಾಗೂ ಮಳೆಯಿಂದ ನೀರು ಬರುತ್ತಿದ್ದು, ತುಂಬಿ ಕೋಡಿ ಬೀಳುವ ಹಂತ ತಲುಪಿದೆ.
ಬಂಡೀಪುರ ಅಭಯಾರಣ್ಯದ ಕೆರೆಗಳಿಗೆ ಜೀವ ಕಳೆ: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯಲ್ಲಿ ಬಂಡೀಪುರ ವಲಯ, ಗೋಪಾಲ ಸ್ವಾಮಿ ಬೆಟ್ಟ ವಲಯ, ಕುಂದರೆಕೆ ವಲಯ, ಮದ್ದೂರು ವಲಯ, ಓಂಕಾರ ವಲಯಗಳಲ್ಲಿ ಕೂಡ ಉತ್ತಮ ಮಳೆಯಾಗಿದ್ದು, ಕಾಡಿನಲ್ಲಿ ಮೂನ್ನೂರಕ್ಕೂ ಹೆಚ್ಚು ಕೆರೆಗಳು ತುಂಬಿದೆ. ಜೊತೆಗೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದರಿಂದ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ಆತಂಕ ದೂರವಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲವು ಕೆರೆಗಳು ಖಾಲಿ-ಖಾಲಿ: ಸಣ್ಣ ನೀರಾವರಿ ಇಲಾಖೆಯು ಮಾಹಿತಿ ಒದಗಿಸಿದ ಪ್ರಕಾರ, ನಿರಂತರ ಮಳೆಯ ನಡುವೆಯೂ ಇನ್ನೂ ಹಲವು ಕೆರೆಗಳು ಖಾಲಿ-ಖಾಲಿಯಾಗಿವೆ.
ಚಾಮರಾಜನಗರದ ಯಡಿಯೂರು ಅಡ್ಡಹಳ್ಳ, ಯಳಂದೂರಿನ ಗೌಡಹಳ್ಳಿ ಹೊಸಕೆರೆ, ಗಣಗ ನೂರುಕೆರೆ, ಅಲ್ಕೆರೆ ಅಗ್ರಹಾರ ಕೆರೆ, ಕೊಳ್ಳೇಗಾಲ ತಾಲೂಕಿನ ಬಾಳಗುಣಸೆ ಕೆರೆ, ಲಿಂಗಮ್ಮನಕೆರೆ, ಹನೂರಿನ ದಿನ್ನಳ್ಳಿ ಕೆರೆ, ಅಲಗಾಪುರಕೆರೆ, ಮಣಗಳ್ಳಿ ಕೆರೆ, ಮಾರ್ಟಹಳ್ಳಿ ಕೆರೆ ಸೇರಿದಂತೆ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ 64 ಕೆರೆಗಳಲ್ಲಿ 15 ಕೆರೆಗಳು ನೀರಿಲ್ಲದೇ ಭಣಗುಡುತ್ತಿವೆ. ಶೇ 30 ರಷ್ಟು 25 ಕೆರೆಗಳು, ಶೇ. 50 ರಷ್ಟು 12 ಕೆರೆಗಳು, ಶೇ. 90 ರಷ್ಟು 9 ಕೆರೆಗಳಲ್ಲಿ ನೀರು ತುಂಬಿದೆ.