ಮಕ್ಕಳಿಗೆ ನೈತಿಕ ಆಧ್ಯಾತ್ಮಿಕ ಶಿಕ್ಷಣ ಅವಶ್ಯ: ವಾಮದೇವಶಿವಾಚಾರ್ಯರು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.26: ಮಕ್ಕಳಿಗೆ ಭೌತಿಕ ಶಿಕ್ಷಣದ ಜೊತೆ ನೈತಿಕ, ಆಧ್ಯಾತ್ಮಿಕ ಶಿಕ್ಷಣವನ್ನು ನೀಡುವುದು  ಅವಶ್ಯವಿದೆಂದು ಎಮ್ಮಿಗನೂರಿನ ಮಹಾಂತ ಮಠದ ವಾಮದೇವ ಶಿವಾಚಾರ್ಯರು ಹೇಳಿದ್ದಾರೆ.
ಅವರು ನಗರದ ಬಸವ ಭವನದಲ್ಲಿ ಇಂದು ಬಳ್ಳಾರಿ ವೀರಶೈವ ಲಿಂಗಾಯತ ಸೇವಾ ಸಮಿತಿ ಟ್ರಸ್ಟ್  ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯತೆವಹಿಸಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಈಗ ವಿದ್ಯಾಭ್ಯಾಸ ನೀಡುತ್ತಿದೆ. ಆದರೆ ನೈತಿಕತೆ ಮತ್ತು ಆಧ್ಯಾತ್ಮಿಕ ಶಿಕ್ಷದ ಕೊರತೆ ಕಾಣುತ್ತಿದೆ. ಅದಕ್ಕಾಗಿ ಮಕ್ಕಳಿಂದ ಆಘಾತಕ ಚಟುವಟಿಕೆಗಳು ನಡೆಯುವುದು ಕಂಡು ಬರುತ್ತಿದೆ. ಅದಕ್ಕಾಗಿ ನೈತಿಕ ಶಿಕ್ಷಣ ಅವಶ್ಯವಾಗಿದೆಂದರು‌
ಶಿಕ್ಷಣ ಕ್ಷೇತ್ರಕ್ಕೆ ಸ್ವಾತಂತ್ರ್ಯ ಪೂರ್ವದಿಂದಲೂ  ಕರ್ನಾಟಕದಲ್ಲಿ ವೀರಶೈವ ಮಠಗಳು, ಸಂಘ ಸಂಸ್ಥೆಗಳಿಂದ ನೀಡಿದ ಅನ್ನ ಮತ್ತು ಅಕ್ಷರ ದಾಸೋಹ ಮಹತ್ವವಾದುದು. ಅದು ಇಂದಿಗೂ ಮುಂದುವರೆದಿದೆ ಇದು ಶ್ಲಾಘನೀಯ ಕಾರ್ಯವೆಂದರು.
ಶುದ್ದ ಬರಹ, ಸ್ಪಷ್ಟ ಶಿಕ್ಷಣ ಇರುವವರು ದೊಡ್ಡವರಾಗುತ್ತಾರೆ. ಶಿಕ್ಷಣ ಕದಿಯಲಾಗದ ಸಂಪತ್ತಾಗಿದೆ. ಅದಕ್ಕಾಗಿ ಮಕ್ಕಳಿಗೆ ಶಿಕ್ಷಣ ಮುಕ್ಯ ಎಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು ಪ್ರತಿಪಾದಿಸಿದರು.
ಎಸ್ ಎಸ್ ಎಲ್ ಸಿಯಲ್ಲಿ   ಶೇ 80 ಮತ್ತು ದ್ವಿತೀಯ ಪಿಯುನಲ್ಲಿ ಶೇ 85 ಕ್ಕಿಂತ ಹೆಚ್ಚು  ಅಂಕಪಡೆದ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ, ಸಮುದಾಯದ ವಿವಿಧ ಮುಖಂಡರು, ವೀ.ವಿ.ಸಂಘದ  ಸದಸ್ಯರಿಗೆ ಈ ವೇಳೆ ಸನ್ಮಾನಿಸಿ ಗೌರವಿಸಲಾಯ್ತು.
ಸಮಾರಂಭದಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಬಸವರಾಜ್, ಖಜಾಂಚಿ ವದ್ದಿಗೇರಿ ಎರ್ರಿಸ್ವಾಮಿ,  ಕಾರ್ಯಕಾರಿ ಸಮಿತಿ ಮಾಜಿ ಸದಸ್ಯ ಕೆ.ಎಂ.ಮಹೇಶ್ವರಸ್ವಾಮಿ, ತರುಣ ಸಂಘದ ಅಧ್ಯಕ್ಷ  ನಂದೀಶ್ ಮಠಂ, ಪಾಲಿಕೆ ಸದಸ್ಯೆ ರೇಖಾ ಮಲ್ಲನಗೌಡ, ಟ್ರಸ್ಟ್ ನ ಕಾರ್ಯದರ್ಶಿ ಬಿಚ್ಚಗಲ್ ಪಂಚಾಕ್ಷರಪ್ಪ ಮೊದಲಾದವರು ಇದ್ದರು