ವಿದ್ಯುತ್ ಅವಘಡದಿಂದ ವಸ್ತುಗಳು ಬೆಂಕಿಗಾಹುತಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.26: ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದಾಗಿ ಮನೆಯ ಫ್ರಿಡ್ಜ್, ಸಾಮಗ್ರಿಗಳು, ಬಟ್ಟೆಬರೆ ಸೇರಿದಂತೆ ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಜಯನಗರ ಬಡಾವಣೆಯಲ್ಲಿ ವಾಸವಿರುವ ಶೀಳನೆರೆ ಹೋಬಳಿಯ ಉಯ್ಗೋನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅನಿತಾ ಅವರಿಗೆ ಸೇರಿದ ಮನೆಯಲ್ಲಿ ಶುಕ್ರವಾರ ತಡರಾತ್ರಿ ಸುರಿದ ಮಳೆಯ ವೇಳೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಉಂಟಾಗಿದೆ. ಅದೃಷ್ಟವಶಾತ್ ಆ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಇದರಿಂದಾಗಿ ಮನೆಯಲ್ಲಿದ್ದ ಪ್ರಿಡ್ಜ್ಗೆ ಬೆಂಕಿ ಬಿದ್ದಿದೆ. ಬೆಂಕಿಯ ಕೆನ್ನಾಲಿಗೆಗೆ ಫ್ರಿಡ್ಜ್ ಸೇರಿದಂತೆ ಗಡಿಯಾರ,ಸೋಫಾ ಚೇರುಗಳು ಬಟ್ಟೆಬರೆಗಳು ಸೇರಿದಂತೆ ಮನೆಯ ಹಲವು ಸಾಮಗ್ರಿಗಳು ಸಿಲುಕಿ ಸುಟ್ಟು ಕರಕಲಾಗಿವೆ. ಶನಿವಾರ ಬೆಳಿಗ್ಗೆ ಸ್ಥಳೀಯರು ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಠಾಣಾಧಿಕಾರಿ ಶಿವಣ್ಣ ನೇತ್ರತ್ವದ ಅಗ್ನಿಶಾಮಕ ತಂಡ ಬೆಂಕಿ ಆರಿಸುವ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿದ್ದಾರೆ. ಘಟನೆಯ ವೇಳೆ ಯಾರೂ ಇರದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಚೆಸ್ಕಾಂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಮನೆಗೆ ಅರ್ತಿಂಗ್ ಇಲ್ಲದಿರುವುದು ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.