ಬಿಜೆಪಿಗರು ಯಾಮಾರಿಸುವುದರಲ್ಲಿ ನಿಸ್ಸೀಮರು
ಕೋಲಾರ, ಮೇ ೨೬- ಬಿಜೆಪಿಯವರು ಸುಳ್ಳಿನ ಕಂತೆಯನ್ನೆ ಬಂಡವಾಳ ಮಾಡಿ ಕೊಂಡು ಜನರನ್ನು ಮೋಸ ಮಾಡಿ ಯಾಮಾರಿಸೋದರಲ್ಲಿ ನಿಸ್ಸೀಮರು ಇನ್ನೂ ಜೆಡಿಎಸ್‌ನವರು ವೈಯಕ್ತಿಕ ವಿಚಾರದಲ್ಲಿ ಮುಳಗಿದ್ದಾರೆ ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ತಿಳಿಸಿದರು.
ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಸ್ಥಳೀಯ ಶಾಸಕರು ಹಾಗೂ ಕಾರ್ಯಕರ್ತರು ಹೆಚ್ಚು ದುಡಿದಿದ್ದಾರೆ ಅವರ ಶ್ರಮದಿಂದ ಕಾಂಗ್ರೆಸ್ ಗೆಲ್ಲವ ವಿಶ್ವಾಸವನ್ನು ಹೊಂದಿದ್ದೇವೆ. ಪೊಲೀಸ್ ವರದಿ ಕೂಡ ಅದನ್ನೇ ಹೇಳಿದೆ, ನಾವು ಈ ಚುನಾವಣೆಯನ್ನು ಅದೇ ವಿಶ್ವಾಸದ ಮೇರೆಗೆ ಎದುರಿ ಗೆಲ್ಲುತ್ತೇವೆ ಎಂದರು.
ಸಚಿವ ಡಾ.ಎಂ.ಸಿ.ಸುಧಾಕರ್ ತಮ್ಮ ಮಗನ ಶಿಕ್ಷಣದ ಕೆಲಸದ ಮೇಲೆ ಅಮೇರಿಕಾಕ್ಕೆ ಹೋಗಿದ್ದಾರೆ ಅವರನ್ನು ಬೇಗನೇ ಬರಲು ಹೇಳಿದ್ದೇನೆ ಆದರೆ, ಬಿಜೆಪಿ ಅಪಪ್ರಚಾರ ಮಾಡುತ್ತಿದೆ, ಅವರಿಗೆ ಬೇರೆ ಕೆಲಸ ಇಲ್ಲ ದುಡ್ಡು ಕಾಸಿನಿಂದ ಚುನಾವಣೆ ನಡೆಯಲ್ಲ, ಕಾರ್ಯಕರ್ತರ ಶ್ರಮದಿಂದ ಚುನಾವಣೆ ಎದುರಿಸೋಣ ಡಿ.ಟಿ.ಶ್ರೀನಿವಾಸ್ ಬಹು ವರ್ಷಗಳ ಸ್ನೇಹಿತ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಅವರ ಗೆಲುವಿಗೆ ನಾವೆಲ್ಲರೂ ಸಂಘಟಿತರಾಗಿ ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಹೇಳಿದರು.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಸಂಪರ್ಕ ಮಾಡುವ ಕೆಲಸ ನಾವು ಮಾಡಬೇಕು, ಬಿಜೆಪಿ ಸರಕಾರದ ಧೋರಣೆಗಳ ವಿರುದ್ದ ಮೇಲ್ಮನೆಯಲ್ಲಿ ದನಿ ಎತ್ತಲು ಕಾಂಗ್ರೆಸ್ ಬಹುಮತ ಪಡೆಯಬೇಕಾಗಿದೆ ಎಂದರು.
ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಈ ಕ್ಷೇತ್ರದ ವ್ಯಾಪ್ತಿಯು ಸುಮಾರು ೫ ಜಿಲ್ಲೆಗಳಿಂದ ೩೩ ಶಾಸಕರನ್ನು ಹೊಂದಿದೆ, ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಹಿಂದೆ ಆಯ್ಕೆಯಾದ ಎಂಎಲ್ಸಿ ೧೮ ವರ್ಷದಿಂದ ಅಧಿಕಾರದಲ್ಲಿ ಇದ್ದು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ ಇವತ್ತು ಬಿಜೆಪಿ ಜೆಡಿಎಸ್ ಪಕ್ಷಗಳು ಮೈತ್ರಿಕೂಟದಿಂದ ಅಭ್ಯರ್ಥಿಯಾಗಿದ್ದಾರೆ ಎಚ್ಚರಿಕೆಯಿಂದ ಚುನಾವಣೆ ಎದುರಿಸಬೇಕು ಎಂದು ಹೇಳಿದರು.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಎಂಎಲ್ಸಿ ಚುನಾವಣೆಯಲ್ಲಿ ಒಂದೊಂದು ಮತವು ಮುಖ್ಯವಾಗಿದೆ ಅವರನ್ನು ನೇರವಾಗಿ ಭೇಟಿ ಮಾಡಿ ಸರಕಾರದ ಯೋಜನೆಗಳ ಜೊತೆಗೆ ಶಿಕ್ಷಕರಿಗೆ ಆಗುವ ಪ್ರಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಮತ ಹಾಕುವಂತೆ ಮಾಡಬೇಕು, ಇದು ಶಿಕ್ಷಕರ ಚುನಾವಣೆ ಅಂತ ನಿರ್ಲಕ್ಷ್ಯ ಮಾಡದೇ ಪ್ರತಿಷ್ಠೆಯಾಗಿ ತೆಗೆದುಕೊಂಡು ಕಾಂಗ್ರೆಸ್ ಗೆಲ್ಲುವಂತೆ ಮಾಡಬೇಕು ಎಂದರು.
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್, ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್,ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾಜಿ ಶಾಸಕ ಕೆಪಿಸಿಸಿ ಉಸ್ತುವಾರಿ ವೆಂಕಟರಮಣಪ್ಪ,, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹರ್ಷದ್ ಉಲ್ಲಾ ಖಾನ್, ಶ್ರೀಧರ್, ಕಾರ್ಯದರ್ಶಿ ಕಾರ್ತಿಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಮುಖಂಡರಾದ ಆದಿನಾರಾಯಣ, ರತ್ನಮ್ಮ, ಜಯದೇವ್, ಇದ್ದರು.