ಪರಿಸರ ಜಾಗೃತಿಯ ಪ್ರಮುಖ ಸುದ್ದಿ
ಸಂಜೆವಾಣಿ ನ್ಯೂಸ್
ಮೇಲುಕೋಟೆ.ಮೇ.26:- ರಾಷ್ಟ್ರೀಯ ಸೇವಾ ಯೋಜನೆಯ ಶಿಭಿರಾರ್ಥಿಗಳ ಶ್ರಮದಾನದಿಂದಾಗಿ ಇಲ್ಲಿನ ಪವಿತ್ರ ತೀರ್ಥ ಹಾಗೂ ದಕ್ಷಿಣಭಾರತದ ಎರಡನೇ ಅತಿದೊಡ್ಡಕಲ್ಯಾಣಿಯ ಸಾಲುಮಂಟಪದ ಹಿಂಭಾಗ ಬೆಳೆದಿದ್ದ ಗಿಡಗಂಟೆಗಳು ತೆರವುಗೊಂಡು ತುಳಸಿ-ಹೂತೋಟ ನಿರ್ಮಾಣಗೊಳ್ಳಲು ಸಜ್ಜುಗೊಂಡಿದೆ.
ಕಲ್ಯಾಣಿಯ ಪಶ್ಚಿಮಭಾಗದ ಸಾಲುಮಂಟಪ ಹಿಂಭಾಗ ಹೇರಳವಾದ ಗಿಡಗಂಟೆಗಳು ಬೆಳೆದು ಹಾವು ಚೇಳುಗಳ ವಾಸಸ್ಥಾನವಾಗಿತ್ತು. ಆದರೆ ಪಾಂಡವಪುರ ವಿಜಯ ಪ್ರಥಮದರ್ಜೆಕಾಲೇಜಿನ ವಿದ್ಯಾರ್ಥಿಗಳು ಮೇಲುಕೋಟೆಯಲ್ಲಿ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಭಿರ ಹಮ್ಮಿಕೊಂಡು ಎರಡೇ ದಿನದಲ್ಲಿ ಇಡೀ ಆವರಣವನ್ನು ಸ್ವಚ್ಚಗೊಳಿಸಿದ್ದಾರೆ. ಇಲ್ಲಿ ಚೆಲುವನಾರಾಯಣನಿಗೆ ಅರ್ಪಿಸಲು ಹೂವು-ತುಳಸಿಯನ್ನು ನಿರಂತರವಾಗಿ ಬೆಳೆಯಬೇಕೆಂಬ ಸದಾಶಯ ವಿದ್ಯಾರ್ಥಿಗಳದ್ದಾಗಿದ್ದು ವಿದ್ಯಾರ್ಥಿಗಳ ಸದಾಶಯಕ್ಕೆ ಅಪರಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜ್ ಸ್ಪಂದಿಸಿದ ಕಾರಣ ಇಡೀ ಆವರಣವನ್ನು ಶನಿವಾರ ಮತ್ತಷ್ಟು ಉತ್ಸಾಹದೊಂದಿಗೆ ಸಂಪೂರ್ಣ ಸ್ವಚ್ಚಮಾಡಿದ್ದಾರೆ.
ಇನ್‍ಪೋಸಿಸ್ ಪೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಕಲ್ಯಾಣಿ ಸಮುಚ್ಚಯ ಜೀರ್ಣೋದ್ಧಾರ ಕೈಗೊಂಡು ಇಡೀ ಆವರಣಕ್ಕೆ ಉತ್ತಮವಾದ ಪೆನ್ಸಿಂಗ್ ಮಾಡಿ ಗೇಟನ್ನೂ ಸಹ ಅಳವಡಿಸಿ ಹೂಗಿಡಗಳನ್ನು ನೆಡಲು ಯೋಜಿಸಿದ್ದರು. ಆದರೆ ಮೇಲುಕೋಟೆಯ ಕುಹಕಿಯೊಬ್ಬ ಬರೆದ ಪತ್ರದಿಂದಾಗಿ ಬೇಸರಗೊಂಡ ಸುಧಾಮೂರ್ತಿ ತಮ್ಮ ಯೋಜನೆಯಿಂದ ಹಿಂದೆಸರಿದಿದ್ದರು. ದೇವಾಲಯದ ಆಡಳಿತವೂ ಸಾಲು ಮಂಟಪದ ಅಶುಚಿತ್ವದ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ಹೇರಳವಾದ ಗಿಡಗಂಟೆಗಳು ಬೆಳೆದಿದ್ದವು ಶಿಭಿರಾಧಿಕಾರಿ ಪ್ರೋ ಎನ್.ಕೆ ವೆಂಕಟೇಗೌಡರ ಆಸಕ್ತಿ ಎಡಿಸಿಯವರ ಪ್ರೋತ್ಸಾಹದ ಪರಿಣಾಮ ಭವ್ಯಸ್ಮಾರಕದ ಸ್ಥಳ ಇದೀಗ ಶುಚಿಯಾಗಿದೆ. ಇಲ್ಲಿ ತುಳಸಿ-ಹೂ ತೋಟ ರೂಪುಗೊಂಡರೆ ಇನ್‍ಪೋಸಿಸ್ ಪೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಆಶಯ ಈಡೇರಿದಂತಾಗುತ್ತದೆ.
ಸರಿಸುಮಾರು 500ಅಡಿ ಉದ್ದ 30ಅಡಿ ಅಗವಿರುವ ಸ್ವಚ್ಚಗೊಂಡಸ್ಥಳದಲ್ಲಿ ಮಳೆಗಾಲವಾದ್ದರಿಂದ ತುಳಸಿ ಹಾಗೂ ಹೂಗಿಡಗಳನ್ನು ನೆಟ್ಟು ಈಗಿರುವ ಕಲ್ಯಾಣಿ ಸ್ವಚ್ಚತಾ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡಿದರೆ ಕ್ಷೇತ್ರದ ಅಧಿದೈವ ಚೆಲುವನಾರಾಯಣಸ್ವಾಮಿ ಹಾಗೂ ಬೆಟ್ಟದೊಡೆಯ ಯೋಗಾನರಸಿಂಹ ಹಾಗೂ ಇತರ ದೇವರಿಗೆ ದಿನ ನಿತ್ಯ ತುಳಸಿ ಸಮರ್ಪಣೆ ಮಾಡಬಹುದಾಗಿದೆ. ಈ ಕಾರ್ಯಯೋಜನೆಯ ನಿರಂತರ ವ್ಯವಸ್ಥೆಗೆ ದೇವಾಲಯದ ಅಧಿಕಾರಿ ಮನಸ್ಸುಮಾಡಬೇಕಿದೆ. ಜೊತೆಗೆ ಭಕ್ತರು ನಾಗರೀಕರೂ ಸಹ ಸಹಕಾರ ನೀಡಬೇಕಿದೆ.
ತುಳಸಿ ಮತ್ತು ಹೂಗಿಡ ತಂದು ಕೊಡಿ
ಮೇಲುಕೋಟೆಯಲ್ಲಿ ರಾಷ್ಟ್ರೀಯ ಸೇವಾಯೋಜನೆಯಕ್ಯಾಂಪ್ ಮೇ 29ರವರೆಗೆ ಇದೆ. ಭಕ್ತರು, ದಾನಿಗಳು ನಾಗರೀಕರು ನಮಗೆ ತುಳಸಿ ಹಾಗೂ ಹೂವಿನ ಗಿಡಗಳನ್ನು ಕೊಡುಗೆಯಾಗಿ ಕೊಟ್ಟರೆ ನಾವು ನೆಟ್ಟುಕೊಡುವ ಕಾರ್ಯಮಾಡುತ್ತೇವೆ. ಮಳೆ ಬರುತ್ತಿರುವ ಕಾರಣ ಸಸಿಗಳು ಹುಲುಸಾಗಿ ಬೆಳೆಯುತ್ತವೆ ಎಂದಿರುವ ಶಿಭಿರಾಧಿಕಾರಿ ಎನ್.ಕೆ ವೆಂಕಟೇಗೌಡ ದಾಸವಾಳ, ಮಲ್ಲಿಗೆ ಗರುಡಾವರ, ಹೀಗೆ ಹಲವುಬಗೆಯ ಹೂವಿನಗಿಡಗಳು, ಕೃಷ್ಣತುಳಸಿ, ವಿಷ್ಣುತೊಳಸಿ ನೀಡಬಹುದಾಗಿದೆ. ಸಸಿಗಳನ್ನು ನೀಡಬಯಸುವ ದಾನಿಗಳು ದೇವಾಲಯದ ಇಒ 9980656371 ಪಾರುಪತ್ತೇಗಾರ್ 9972366194 ಅಥವಾ ಶಿಭಿರಾಧಿಕಾರಿ 9964635022 ಸಂಪರ್ಕಿಸಬಹುದು ಎಂದು ಕೋರಿದ್ದಾರೆ.