ನಾಳೆ ಶರಣರ ಶಕ್ತಿ ಚಿತ್ರದ ಸಾಂಗ್ ಬಿಡುಗಡೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೫; ಶ್ರೀಷಾ ಫಿಲ್ಮ್ಸ್, ಹುಬ್ಬಳ್ಳಿ ನಿರ್ಮಿಸಿರುವ ಬಸವಣ್ಣನವರ ಜೀವನಾಧಾರಿತ ಕನ್ನಡ ಚಲನಚಿತ್ರ ‘ಶರಣರ ಶಕ್ತಿ’ ಮುಂದಿನ ತಿಂಗಳು ಬಿಡುಗಡೆಗೆ ಸಿದ್ದವಾಗಿದೆ ಎಂದು ಚಿತ್ರದ ನಿರ್ದೇಶಕ ದಿಲೀಪ್ ವಿ. ಶರ್ಮಾ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರ ಪ್ರಖ್ಯಾತಿ  ಹೇಗಿತ್ತು ? ಅನುಭವ ಮಂಟಪದ ಆಕರ್ಷಣೆ, ಬಸವಣ್ಣನವರ ಶಕ್ತಿಗಳನ್ನು ಚಿತ್ರಿಸಲಾಗಿದೆ. ಕಲ್ಯಾಣಕ್ಕೆ ಬೇರೆ ಬೇರೆ ಪ್ರಾಂತ್ಯಗಳಿಂದ ಶರಣರು ಏಕೆ ಬಂದರು ಎಂಬುದೇ ಕಥೆಯ ಮೂಲವಾಗಿದೆ ಎಂದರು.ವಚನ ಸಾಹಿತ್ಯಕ್ಕಾಗಿ ಶರಣರು ಮಾಡಿದ ಜೀವ ಬಲಿದಾನಗಳನ್ನು ಚಿತ್ರ ಎತ್ತಿ ಹಿಡಿಯಲಾಗಿದೆ. ಅಳಿವಿನಿಂದ ಉಳಿವಿಯ ವರೆಗೆ ನಡೆದ ಘಟನೆಗಳನ್ನು  ಚಿತ್ರೀಕರಿಸಲಾಗಿದೆ. 40 ದಿನಗಳ ಚಿತ್ರೀಕರಣವನ್ನು ಈಗಾಗಲೇ ಪೂರ್ತಿಗೊಳಿಸಿ, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಮುಗಿಸಿ, ಸೆನ್ಸಾರ್ ಗೆ ಸಿದ್ಧವಾಗಿದೆ. ದಾವಣಗೆರೆ, ಕಕ್ಕರಗೊಳ್ಳ,ದೊಗ್ಗಳ್ಳಿ, ಕೊಂಡಜ್ಜಿ ಹಾಗೂ ಹುಬ್ಬಳ್ಳಿಯಲ್ಲಿ ಯಲ್ಲಿ  ಚಿತ್ರೀಕರಣವನ್ನು ಮಾಡಲಾಗಿದೆ ಎಂದರು.ದಾವಣಗೆರೆ ಮಹಾನಗರಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ  ಅಬ್ದುಲ್ ಲತೀಫ್‌  ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕುರುಬ ಬಲ್ಲಗನಾಗಿ ನಟಿಸಿರುವುದು ವಿಶೇಷ.ಈ ಚಿತ್ರವು ಕೆಳಗಿನ ತಾಂತ್ರಿಕ ವರ್ಗವನ್ನು ಒಳಗೊಂಡಿದೆ.ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ  ದಿಲೀಪ್ ವಿ. ಶರ್ಮ ನಿರ್ವಹಿಸುತ್ತಿದ್ದು,ನಿರ್ಮಾಪಕರು ಆರಾಧನಾ ಕುಲಕರ್ಣಿ, ವಿನು ಮನಸ್ಸು ಸಂಗೀತ ನೀಡಿದ್ದು, ಸಾಹಿತ್ಯ ಕೆ.ಕಲ್ಯಾಣ, ಛಾಯಾಗ್ರಹಣ ಮುಂಜಾನೆ ಮಂಜು, ಸಂಕಲನ  ಆರ್. ಮಹಾಂತೇಶ್ ನಿರ್ವಹಿಸಿದ್ದಾರೆ.ತಾರಾಗಣದಲ್ಲಿ  ಬಸವಣ್ಣ ಪಾತ್ರದಲ್ಲಿ ಮಂಜುನಾಥಗೌಡ ಪಾಟೀಲ್, ಚನ್ನಬಸವಣ್ಣರಾಗಿ ಧೃವಶರ್ಮ, ತಳವಾರ,ಕಾಮಿದೇವನಾಗಿ ರಮೇಶ್ ಪಂಡಿತ್, ನಾಗಮ್ಮ ಪಾತ್ರದಲ್ಲಿ ಆರಾಧನಾ ಕುಲಕರ್ಣಿ, ಹರಳಯ್ಯನವರಾಗಿ ರಾಮಕೃಷ್ಣ ದೊಡ್ಡನಿ, ಸಂಕವ್ವ ಪಾತ್ರದಲ್ಲಿ ಶೃತಿ ಹೆಗಡೆ, ನೀಲಾಂಬಿಕಾ ಪಾತ್ರದಲ್ಲಿ ಸಂಗೀತಾ ಹುಲ್ಲೂರು, ಶ್ರೀನಿವಾಸ ಜಿ. ಇನ್ನಿತರರು ನಟಿಸಿದ್ದಾರೆ.ನಾಳೆ ಮೇ 26 ಭಾನುವಾರ ಸಂಜೆ 6.30 ಕ್ಕೆ ಜಯದೇವ ವೃತ್ತದಲ್ಲಿರುವ  ಶಿವಯೋಗಿ ಮಂದಿರದಲ್ಲಿ ಚಿತ್ರದ ‘ಶರಣರ ನೋಡು’  ಹಾಡನ್ನು  ಶ್ರೀ ಡಾ. ಬಸವಪ್ರಭು ಸ್ವಾಮಿ ಬಿಡುಗಡೆ ಮಾಡಲಾಗುವುದು. ಮೇಯರ್ ವಿನಾಯಕ್ ಪೈಲ್ವಾನ್,  ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಜಿ. ಬಸವನಗೌಡ್ರು, ಬಿಐಇಟಿ ನಿರ್ದೇಶಕ ವೈ. ವೃಷಭೇಂದ್ರಪ್ಪ, ರಾಮಕೃಷ್ಣ ದೊಡ್ಡನಿ ಮಾಜಿ ಶಾಸಕರು ಶಿರಹಟ್ಟಿ ಉಪಸ್ಥಿತರಿರುವರು ಎಂದು ಅಬ್ದುಲ್ ಲತೀಫ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಧುವ್ರ ಶರ್ಮ,ಮಂಜುನಾಥ್ ಗೌಡ ಪಾಟೀಲ್,ಶ್ರೀನಿವಾಸ್, ಭಾರ್ಗವ್ ಶರ್ಮ,ಉಪಸ್ಥಿತರಿದ್ದರು.