ಲಿಂ. ಅಕ್ಕ ಅನ್ನಪೂರ್ಣ ತಾಯಿಗೆ ಶ್ರದ್ಧಾಂಜಲಿ
ಔರಾದ್:ಮೇ.25: ಪೂಜ್ಯ ಅಕ್ಕ ಅನ್ನಪೂರ್ಣ ತಾಯಿಯವರು ಅನಾರೋಗ್ಯದಿಂದ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಭಾರತೀಯ ಬಸವ ಬಳಗ, ರಾಷ್ಟ್ರೀಯ ಬಸವ ಬಳಗದಿಂದ ಸಂತಪೂರ ಗ್ರಾಮದಲ್ಲಿ ಶುಕ್ರವಾರ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಸಂಜುಕುಮಾರ ಜುಮ್ಮಾ ಮಾತನಾಡಿ, ಅಕ್ಕ ಅನ್ನಪೂರ್ಣ ತಾಯಿ ಅವರು ಬಸವ ಸೇವಾ ಪ್ರತಿಷ್ಠಾನ ಮತ್ತು ಲಿಂಗಾಯತ ಮಹಾ ಮಠವನ್ನು ಹುಟ್ಟು ಹಾಕಿ ಬಸವ ಪ್ರಜ್ಞೆ ಜಾಗೃತಗೊಳಿಸಿದ್ದರು. ಬಸವ ತತ್ವ ಪ್ರಚಾರಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ತನ್ನ ಜೀವನದ ಉಸಿರನ್ನಾಗಿಸಿಕೊಂಡು ಸದಾಕಾಲ ಪ್ರವಚನ, ಲಿಂಗ ಪೂಜೆಯಲ್ಲಿ ತೊಡಗಿ ಜನರಲ್ಲಿ ಅದರ ಅರಿವನ್ನುಂಟು ಮಾಡುತ್ತ ಹಸನ್ಮುಖಿಯಾಗಿರುತ್ತಿದ್ದ ಅಕ್ಕ ಅನ್ನಪೂರ್ಣ ಅವರು ಲಿಂಗೈಕ್ಯರಾದುದು ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ರಾಷ್ಟ್ರೀಯ ಬಸವ ಬಳಗದ ತಾಲೂಕು ಅಧ್ಯಕ್ಷ ಶಿವಶರಣಪ್ಪ ವಲ್ಲೇಪೂರೆ ಮಾತನಾಡಿ, ಅನ್ನಪೂರ್ಣ ಅಕ್ಕನವರು ಮಾತೃ ಹೃದಯಿ ಗುಣ ಹೊಂದಿದ್ದರು. ಪ್ರವಚನಗಳ ಮೂಲಕ ಬಸವ ಪ್ರಜ್ಞೆಯನ್ನು ಜಾಗೃತಿಗೊಳಿಸಿದ್ದಾರೆ. ಬೀದರನ ಬಸವಗಿರಿಯಲ್ಲಿ ಪ್ರತಿವರ್ಷ ಆಚರಿಸುತ್ತಿದ್ದ ವಚನ ವಿಜಯೋತ್ಸವ ದೇಶದ ಗಮನ ಸೆಳೆಯುವಂತೆ ಮಾಡಿದ್ದಾರೆ. ವ್ಯಕ್ತಿಗೆ ಪಟ್ಟಾಭಿಷೇಕದ ಸಂಪ್ರದಾಯವನ್ನು ಬಿಟ್ಟು ಬಸವಾದಿ ಶರಣರು ರಚಿಸಿದ ಲಿಂಗಾಯತ ಧರ್ಮ ಗ್ರಂಥಗಳಾದ ವಚನಗಳಿಗೆ ಪಟ್ಟಾಭಿಷೇಕ ಮಾಡುವ ಪದ್ಧತಿ ಅನುಸರಿಸಿ ಮಾದರಿಯಾದವರು. ಶರಣ ತತ್ವ ಮತ್ತು ಸಮಾಜಕ್ಕೆ ಅವರ ಕೊಡುಗೆ ಅನನ್ಯವಾಗಿದೆ ಎಂದು ನುಡಿನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಡಾ. ಸಂಗಮೇಶ, ಶಿವಕುಮಾರ ಹಿರೇಮಠ, ನವೀಲಕುಮಾರ ಉತ್ಕಾರ, ನಾಗಯ್ಯ ಸ್ವಾಮಿ, ರಾಜಕುಮಾರ ಬೆಣ್ಣೆ ಸೇರಿದಂತೆ ಇತರರಿದ್ದರು.