ಹೆಚ್. ಆಂಜನೇಯರನ್ನು ವಿಧಾನ ಪರಿಷತ್ತಿಗೆ ಅಭ್ಯರ್ಥಿಯನ್ನಾಗಿ ಪರಿಗಣಿಸಲು ಒತ್ತಾಯ

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೨೪: ಕಳೆದ ನಾಲ್ಕುವರೆ ದಶಕಗಳಿಂದ ಸುದೀರ್ಘವಾಗಿ ಕಾಂಗ್ರೆಸ್ ಪಕ್ಷದ ನಿಷ್ಠರಾಗಿ, ಪಕ್ಷ ನೀಡಿರುವ ವಿವಿಧ ಹಂತಗಳಲ್ಲಿನ ಜವಾಬ್ದಾರಿಯನ್ನು ತುಂಬಾ ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ನಿಭಾಯಿಸಿ, ಆ ಸ್ಥಾನಗಳಿಗೆ ನ್ಯಾಯ ದೊರಕಿಸಿ ಕೊಟ್ಟಿರುವ ಮಾಜಿ ಸಚಿವ ಹೆಚ್.ಆಂಜನೇಯರನ್ನು  ಜೂನ್ ,13ರಂದು ನಡೆಯುವ ವಿಧಾನ ಪರಿಷತ್ತು ಚುನಾವಣೆಗೆ ಅಭ್ಯರ್ಥಿಯನ್ನಾಗಿ ಪರಿಗಣಿಸುವಂತೆ ಮಾದಿಗ ಪದವೀಧರತ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಆರ್.ಚಿರಂಜೀವಿ ಆಗ್ರಹಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ನಗರದ ನಗರಸಭೆಯ ಸದಸ್ಯರಾಗಿ ಕಾರ್ಯ ಪ್ರಾರಂಭಿಸಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೇಸ್ಸಿನ ರಾಜ್ಯಾಧ್ಯಕ್ಷರಾಗಿ, ಸೇವಾ ದಳದ ಅಧ್ಯಕ್ಷರಾಗಿ, ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಗಳಾಗಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾಗಿ, ಪ್ರಸ್ತುತ ಕೆ.ಪಿ.ಸಿ.ಸಿ.ಉಪಾಧ್ಯಕ್ಷರಾಗಿ, ಹೀಗೆ ಪಕ್ಷ ನೀಡಿದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ ಎಂದರು.2023ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರಗಳಿಂದ ಸೋಲನ್ನು ಅನುಭವಿಸಿದ್ದರೂ ಛಲ ಬಿಡದೆ ಸೋಲು, ಗೆಲುವುಗಳನ್ನು ಸಮಾನಂತರದಿಂದ ಕಾಣುವ ಮೂಲಕ ಪಕ್ಷ ಸಂಘಟನೆ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲೂ ಸಹ ರಾಜ್ಯದ ಮೂಲೆ ಮೂಲೆಗಳಿಗೆ ತೆರಳಿ, ನಮ್ಮ ಸಮಾಜದ ಜನರನ್ನು, ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಒಗ್ಗೂಡಿಸಿ, ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಲ್ಲುವಂತೆ ಮಾಡಿ, ಹೆಚ್ಚಿನ ಮತವನ್ನು ಹಾಕಿಸಿದ್ದಾರೆ ಎಂದು ಹೇಳಿದರು.