ಡೆಂಗೀ ಮತ್ತು ಇತರೆ ಕೀಟಜನ್ಯ ರೋಗಗಳ ನಿಯಂತ್ರಣ: ಜನರಲ್ಲಿ ಜಾಗೃತಿ ಮೂಡಿಸಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.೨೪; ಜಿಲ್ಲೆಯಲ್ಲಿ ಮಳೆ ಪ್ರಾರಂಭವಾಗಿದ್ದು, ಡೆಂಗೀ ಮತ್ತು ಇತರೆ ಕೀಟಜನ್ಯ ರೋಗಗಳ ನಿಯಂತ್ರಣಕ್ಕಾಗಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಡೆಂಗೀ ಮತ್ತು ಚಿಕುಂಗುನ್ಯಾ ನಿಯಂತ್ರಣ ಮತ್ತು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಬಗ್ಗೆ ಜಿಲ್ಲಾಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಈ ಬಾರಿ ಹೆಚ್ಚಿನ ಮಳೆಯಾಗುವ ಸಂಭವವಿದ್ದು, ಮಳೆಗಾಲದಲ್ಲಿ ಡೆಂಗ್ಯೂ ಹಾಗೂ ಚಿಕುಂಗುನ್ಯಾದಂತಹ ಕೀಟಜನ್ಯ ರೋಗಗಳ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಶಿಕ್ಷಕರ ಮೂಲಕ  ಶಾಲಾ ಮಕ್ಕಳಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಸಮುದಾಯದ ನಾಗರೀಕರು ಕೂಡ ತಮ್ಮ ಜವಾಬ್ದಾರಿ ಅರಿತು ತಮ್ಮ ಮನೆ ಹಾಗೂ ಸುತ್ತ-ಮುತ್ತಲಿನ ಸ್ಥಳಗಳು ಶುಭ್ರವಾಗಿರಿಸಿಕೊಂಡು ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಬೇಕು. ಆ ಮೂಲಕ ಕೀಟಜನ್ಯ ರೋಗಗಳ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಸಲಹೆ ನೀಡಿದರು.ಡೆಂಗಿ ನಿಯಂತ್ರಣಕ್ಕಾಗಿ ವಿಶೇಷವಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಕಡೆ  ಹಾಗೂ ಸ್ಲಂ ಏರಿಯಾಗಳಲ್ಲಿ ಜಾಗೃತಿ ಮೂಡಿಸಬೇಕು. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ಹಾಗೂ ಸಿದ್ಧತೆ ಕೈಗೊಳ್ಳುವುದು ಅತ್ಯುತ್ತಮ. ಹಾಗಾಗಿ ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಕಸ ವಿಲೇವಾರಿ ವಾಹನಗಳ ಮೂಲಕ ಜಾಗೃತಿ ಮೂಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಚರಂಡಿಗಳ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರು ಹಾಗೂ ಶುಚಿತ್ವಕ್ಕೆ ಹೆಚ್ಚಿನ ಗಮನಹರಿಸಬೇಕು ಅಧಿಕಾರಿಗಳಿಗೆ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.