ಬಾಳು ಬೆಳಗಲು ಸಂಸ್ಕಾರ ಸಂಸ್ಕೃತಿ ಬೇಕು :  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ
ಬಾಳೆಹೊನ್ನೂರು. ಮೇ.೨೪; ಬಾಳಿನ ಉನ್ನತಿಗೆ ಧರ್ಮಾಚರಣೆ ಬೇಕು. ಮನುಷ್ಯನಾಗಿ ಬಾಳುವುದು ಸಂಸ್ಕೃತಿಯ ಲಕ್ಷಣ. ಬಾಳು ಬೆಳಗಲು ಸಂಸ್ಕಾರ ಮತ್ತು ಸಂಸ್ಕೃತಿ ಅವಶ್ಯಕವೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ಶ್ರೀ ರಂಭಾಪುರಿ ಪೀಠದಲ್ಲಿ ಹುಣ್ಣಿಮೆ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮನುಷ್ಯ ಶ್ರೇಷ್ಠ ಮತ್ತು ಕನಿಷ್ಠ ಆಗುವುದು ನಡವಳಿಕೆಯಿಂದ ಎಂಬುದನ್ನು ಮರೆಯಬಾರದು. ಪ್ರಪಂಚದ ರೋಗಗಳಿಗೆಲ್ಲ ಔಷಧಿ ಇಲ್ಲದಿದ್ದರೂ ಮನದ ರೋಗಗಳಿಗೆಲ್ಲ ಔಷಧ ಇದ್ದೇ ಇದೆ. ಮನದ ರೋಗವೇ ಇತರ ರೋಗಗಳಿಗೆ ಮೂಲ. ಎಲ್ಲ ಕಾಲಕ್ಕೂ ಸತ್ಯ ಸತ್ಯವೇ. ಸುಳ್ಳು ಸುಳ್ಳೇ. ಸತ್ಯ ಕಾಣಲು ಸಮಯ ಶ್ರಮ ಬೇಕಾಗುತ್ತದೆ. ನಡೆಯುವ ದಾರಿಯಲ್ಲಿ ತಾಕತ್ತು ಇದ್ದರೆ ತಡೆಯುವ ಶಕ್ತಿ ಯಾರಿಗೂ ಇರುವುದಿಲ್ಲ. ಮೂರ್ಖನ ಹೃದಯ ಅವನ ನಾಲಿಗೆಯಲ್ಲಿ ಇರುತ್ತದೆ. ವಿವೇಕಿಯ ನಾಲಿಗೆ ಅವನ ಹೃದಯದಲ್ಲಿ ಇರುತ್ತದೆ. ಸಮಯ ಸಂದರ್ಭಗಳು ಯಾವಾಗಲೂ ಬದಲಾಗುತ್ತಿರುತ್ತವೆ. ಆದರೆ ಒಳ್ಳೆಯ ಸಂಬAಧಗಳು ಹಾಗೂ ನಿಜವಾದ ಸ್ನೇಹಿತರು ಎಂದೂ ಬದಲಾಗುವುದಿಲ್ಲ. ಇತಿಹಾಸ ನಿನ್ನೆ ಸುಖವಿತ್ತೆಂದು ಹೇಳುತ್ತದೆ. ವಿಜ್ಞಾನ ನಾಳೆ ಸುಖವಿರುವುದೆಂದು ಹೇಳುತ್ತದೆ. ಆದರೆ ಧರ್ಮ ಹೇಳುತ್ತದೆ. ಸತ್ಯವಾದ ಮನಸ್ಸು ಹಾಗೂ ಸ್ವಚ್ಛವಾದ ಹೃದಯವಿದ್ದರೆ ನಿತ್ಯವೂ ಸುಖ ಇರುವುದೆಂದು ಭಾರತೀಯ ತತ್ವಜ್ಞಾನ ಹೇಳುತ್ತದೆ. ಬದುಕು ಅನ್ನುವುದು ನದಿಯ ಕೊನೆಯಿಲ್ಲದ ಪಯಣ. ಯಾವುದೂ ನಮ್ಮ ಜೊತೆ ಉಳಿಯುವುದಿಲ್ಲ. ಉಳಿಯುವುದು ಒಂದೇ ಹೃದಯಕ್ಕೆ ತಟ್ಟಿದ ನೆನಪೆಂಬುದನ್ನು ತಿಳಿಯಬೇಕು. ಉಜ್ವಲ ಜೀವನÀ ಉನ್ನತಿ ಮತ್ತು ಶ್ರೇಯಸ್ಸಿಗಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ನಿರೂಪಿಸಿದ ವಿಚಾರ ಧಾರೆಗಳನ್ನು ಅನುಸರಿಸಿ ಬಾಳಿದರೆ ನೆಮ್ಮದಿ ಶಾಂತಿ ಪ್ರಾಪ್ತವಾಗುವುದೆಂದರು. ಈ ಪವಿತ್ರ ಸಮಾರಂಭದಲ್ಲಿ ಮಳಲಿಮಠದ ಡಾ.ನಾಗಭೂಷಣ ಶಿವಾಚಾರ್ಯರು, ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯರು, ಹನುಮಾಪುರ ಹಿರೇಮಠದ ಡಾ.ಸೋಮಶೇಖರ ಶಿವಾಚಾರ್ಯರು, ಆಲೂರು ಹಿರೇಮಠದ ಶ್ರೀಗಳು, ವೀರೇಶ ಪಾಟೀಲ, ಮನು ಸಹೋದರರು ಭದ್ರಾವತಿ ಉಪಸ್ಥಿತರಿದ್ದರು.