ಖಾಸೆಂಪೂರ ಗ್ರಾಮಕ್ಕೆ ನೀರು ಸರಬರಾಜು ನಿಲ್ಲಿಸಿದ ಕ್ರಮ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ
ಔರಾದ : ಮೇ.25:ತಾಲೂಕಿನ ಎನಗುಂದಾ ಗ್ರಾಮದ ಸರ್ಕಾರಿ ಬಾವಿಯಿಂದ ಖಾಸೆಂಪೂರ ಗ್ರಾಮಕ್ಕೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದ ಕ್ರಮವನ್ನು ಖಂಡಿಸಿ ಖಾಸೆಂಪೂರ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಹಸೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಖಾಸೆಂಪೂರ ಗ್ರಾಮಕ್ಕೆ ನೆರೆಯ ಎನಗುಂದಾ ಗ್ರಾಮದ ಸೀಮೆಯ ಸರ್ವೆ ನಂ. 25/97 ಹಳ್ಳದ ದಂಡೆಯ ಮೇಲೆ 1972ರಲ್ಲಿ ಬಾವಿ ತೋಡಿ, 1997-98 ರಲ್ಲಿ ಜಿಲ್ಲಾ ಪಂಚಾಯತ ಜಲ ನಿರ್ಮಲ ಯೋಜನೆಯಡಿಯಲ್ಲಿ ಪೈಪ್‍ಲೈನ್ ಮಾಡಿ 1972 ರಿಂದ ಖಾಸೆಂಪೂರ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಏಕಾಎಕಿ ನೀರು ಬಂದ ಮಾಡಿ ಖಾಸಗಿ ವ್ಯಕ್ತಿಯಾದ ಸರ್ವೆ ನಂ.25/*/3ರ ಮಾಲೀಕ ತನ್ನ ಖಾಸಗಿ ಕೆಲಸಕ್ಕಾಗಿ ಬಾವಿಯ ನೀರನ್ನು ಉಪಯೋಗ ಮಾಡಿಕೊಳ್ಳುತ್ತಿದ್ದು, ಖಾಸೆಂಪೂರ ಗ್ರಾಮಕ್ಕೆ ನೀರಿನ ಬರ ಬಂದಂತಾಗಿದೆ. ಆದ್ದರಿಂದ ಸದರಿ ಕ್ರಮವನ್ನು ಪರಿಶೀಲಿಸಿ ಗ್ರಾಮಸ್ಥರಿಗೆ ನೀರು ಹರಿಸಿ ಖಾಸೆಂಪೂರ ಗ್ರಾಮಸ್ಥರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಗಣಪತಿ ಪಾಟೀಲ, ನಾಗನಾಥ ಲಕ್ಕಾ, ಬಂಡೆಪ್ಪ ಪಾಂಚಾಳ, ಕಾಶಿನಾಥ ಪಾಟೀಲ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.